ಹುಬ್ಬಳ್ಳಿ: ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಘೊಷಿಸಿದ ಲಾಕ್ಡೌನ್ ವಾಣಿಜ್ಯ ನಗರಿಯಲ್ಲಿ ಹೆಸರಿಗಷ್ಟೇ ಎನ್ನುವಂತಾಗಿದೆ. ಸೋಮವಾರ ನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾ ಬಜಾರ್, ದುರ್ಗದಬೈಲ್ ಇತರೆಡೆ ವಾಹನ ಹಾಗೂ ಜನ ಸಂಚಾರ ಸಾಮಾನ್ಯವಾಗಿತ್ತು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಅಲ್ಲಲ್ಲಿ ತಡೆದ ಪೊಲೀಸರು, ಸವಾರರ ದಾಖಲೆಗಳನ್ನು ಪರಿಶೀಲಿಸಿದರು. ದಾಖಲೆಗಳಿಲ್ಲದ ವಾಹನಗಳನ್ನು ಸೀಜ್ ಮಾಡಿದರು. ಕೆಲವರಿಗೆ ಲಾಠಿ ರುಚಿಯನ್ನೂ ತೋರಿಸಿದರು. ಸಮಯ ಮೀರಿ ಅಂಗಡಿ ಮುಂಗಟ್ಟು ತೆರೆದಿದ್ದರಿಂದ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಾಲೀಕರಿಗೆ ತಿಳಿಹೇಳಿ ಮುಚ್ಚಿಸಿದರು.
ದುರ್ಗದಬೈಲ್, ಜನತಾ ಬಜಾರ್ನಲ್ಲಿ ದಿನಸಿ, ತರಕಾರಿ, ಹೂವು, ಹಣ್ಣಿನ ವ್ಯಾಪಾರ ನಿರಂತರವಾಗಿ ನಡೆಯಿತು. ಆದರೆ ಅಲ್ಲಿದ್ದ ಜನರು ಗುಂಪುಗೂಡಿಯೇ ಖರೀದಿಸಿದರು. ಕೆಲವರು ಮಾಸ್ಕ್ ಧರಿಸಿದ್ದರಾದರೂ ಪರಸ್ಪರ ಅಂತರ ಮಾಯವಾಗಿತ್ತು.
ಸರ್ಕಾರಿ ಕಚೇರಿಗಳಲ್ಲಿ ಜನರ ದಟ್ಟಣೆಯೂ ಅಷ್ಟೊಂದು ಕಂಡುಬರಲಿಲ್ಲ. ಹೊಸ ಹಾಗೂ ಹಳೆಯ ಬಸ್ ನಿಲ್ದಾಣದಲ್ಲಿ ಬಸ್ಗಳ ಸಂಚಾರ ಇರಲಿಲ್ಲ. ಬಂದ ಪ್ರಯಾಣಿಕರಿಗೆ ಅಲ್ಲಿದ್ದ ಪೊಲೀಸರು ತಿಳಿಹೇಳಿ ಕಳುಹಿಸಿದರು. ಇದರಿಂದ ಬಸ್ ನಿಲ್ದಾಣಗಳೆರಡೂ ಬಿಕೋ ಎನ್ನುತ್ತಿದ್ದವು. ಅಲ್ಲಲ್ಲಿ ಬಹಳಷ್ಟು ಆಟೋಗಳೂ ಓಡಾಡುತ್ತಿದ್ದವು.