ಹುಬ್ಬಳ್ಳಿ: ಸೀಲ್ಡೌನ್ ನಿಯಮ ಬಹಿರಂಗ ಉಲ್ಲಂಘನೆ, ಕಾಣದ ಪೊಲೀಸರು, ಲಾಕ್ಡೌನ್ ಮಧ್ಯೆಯೂ ವಾಹನ ಸಂಚಾರ... ಕರೊನಾ ಸೋಂಕಿತ 13 ವರ್ಷದ ಬಾಲಕಿ ಮನೆ ಇರುವ ಕೇಶ್ವಾಪುರದ ಆಜಾದ್ ಕಾಲನಿಯ ಸೀಲ್ಡೌನ್ ಪ್ರದೇಶ, ನಗರದಾದ್ಯಂತ ಲಾಕ್ಡೌನ್ ಪ್ರದೇಶದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳಿವು.
ಸವೋದಯ ವೃತ್ತದ ಬಳಿ ಬ್ಯಾರಿಕೇಡ್ ಹಾಕಿ ಆಜಾದ್ ಕಾಲನಿ ಸುತ್ತಲಿನ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಿದ್ದರೂ ಜನರ ತಿರುಗಾಟ ಮುಂದುವರಿದಿತ್ತು. ಜನರು ಪೊಲೀಸರ ಕಣ್ತಪ್ಪಿಸಿ, ಬ್ಯಾರಿಕೇಡ್ನ ಕಿಂಡಿಯಲ್ಲೇ ನುಸುಳಿಸೀಲ್ ಡೌನ್ ಪ್ರದೇಶಕ್ಕೆ ಉಚಿತ ಪ್ರವೇಶ ಪಡೆಯುತ್ತಿದ್ದರು.
ಮತ್ತೊಂದು ಸೀಲ್ಡೌನ್ ಪ್ರದೇಶ ಮುಲ್ಲಾ ಓಣಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ಪೊಲೀಸರು ತಡೆದು ವಾಪಸ್ ಕಳುಹಿಸುತ್ತಿದ್ದಾರೆ. ಆದರೆ, ಕೇಶ್ವಾಪುರ ಆಜಾದ್ ಕಾಲನಿ ಸಂರ್ಪಸುವ ಅನೇಕ ರಸ್ತೆಗಳಲ್ಲಿ ಪೊಲೀಸರು ಇರಲಿಲ್ಲ. ಈ ಮಧ್ಯೆ ಲಾಕ್ಡೌನ್ ಘೋಷಿಸಿದ ಇತರ ಪ್ರದೇಶಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು.
ಕೇಶ್ವಾಪುರದ ಕುಸುಗಲ್ ರಸ್ತೆ, ಸ್ಟೇಶನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಗೋಕುಲ ರಸ್ತೆ, ವಿದ್ಯಾನಗರ, ಉಣಕಲ್ ಇತರ ಪ್ರದೇಶಗಳಲ್ಲಿ ಬೈಕ್, ಕಾರು, ಆಟೋಗಳ ಸಂಚಾರ ಮುಂದುವರಿದಿತ್ತು. ಪೂರ್ವ ಸಂಚಾರ ಠಾಣೆ ಪೊಲೀಸರು ಶುಕ್ರವಾರ ಮಧ್ಯಾಹ್ನ ಚನ್ನಮ್ಮ ವೃತ್ತದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ಗಳನ್ನು ವಶಪಡಿಸಿಕೊಂಡರು.