ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ತಮ್ಮ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯಲ್ಲಿರುವ ತಮ್ಮ ತಂದೆ-ತಾಯಿಯ ಸಮಾಧಿಗೆಭೇಟಿ ನೀಡಿ ನಮನ ಸಲ್ಲಿಸಿ, ಆಶೀರ್ವಾದ ಕೋರಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶುಕ್ರವಾರ ರಾತ್ರಿಯೇ ಸಿಎಂ ಹುಬ್ಬಳ್ಳಿಗೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ಇಲ್ಲಿನ ಆದರ್ಶ ನಗರದಲ್ಲಿರುವ ಸಿಎಂ ಬೊಮ್ಮಾಯಿ ಅವರ ಮನೆಗೆ ಅಭಿಮಾನಿಗಳು, ಆಪ್ತರು ಭೇಟಿ ನೀಡಿ ಶುಭಾಶಯ ಕೋರಿದರು.
ನಂತರ ಮುಖ್ಯಮಂತ್ರಿ ಅವರು ತಮ್ಮ ತಂದೆ ಎಸ್.ಆರ್. ಬೊಮ್ಮಾಯಿ ಹಾಗೂ ತಾಯಿ ಗಂಗಮ್ಮ ಅವರ ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಕೆಲ ಕ್ಷಣ ಭಾವುಕರಾಗಿದ್ದರು. ಸಚಿವ ಗೋವಿಂದ ಕಾರಜೋಳ ಹಾಜರಿದ್ದರು.
ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಸಮಾಧಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಹೋಟೆಲ್ ಡೆನಿಸನ್ಸ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಮುರುಗೇಶ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ ಮೊದಲಾದವರು ಮುಖ್ಯಮಂತ್ರಿಯವರಿಗೆ ಜನ್ಮದಿನದ ಶುಭಾಶಯ ಕೋರಿದರು.