ಹುಬ್ಬಳ್ಳಿ : ವಿಆರ್ಎಲ್ ಲಾಜಿಸ್ಟಿಕ್ಸ್ ಲಿ., ಹರಿದ್ವಾರ ಪತಂಜಲಿ ಯೋಗ ಪೀಠ ಸಹಯೋಗದಲ್ಲಿ ಯೋಗ ಗುರು ಬಾಬಾ ರಾಮದೇವ ನೇತೃತ್ವದಲ್ಲಿ ರೈಲ್ವೆ ಸ್ಟೇಷನ್ ಮೈದಾನದಲ್ಲಿ ಜ. 30ರಿಂದ ಫೆ. 3ರವರೆಗೆ ನಡೆಯಲಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ ನಿಮಿತ್ತ ಬುಧವಾರ ನಗರದ ವಿವಿಧೆಡೆ ‘ಯೋಗ ಪ್ರಚಾರ ಜಾಥಾ’ ನಡೆಯಿತು.
ಅರವಿಂದ ನಗರದ ವಿವೇಕಾನಂದ ಶಾಲೆ, ಬಮ್ಮಾಪೂರ ಓಣಿಯ ಓಲೇಮಠ, ಚಿನ್ಮಯ ಮಹಾವಿದ್ಯಾಲಯ, ಹಳೇಹುಬ್ಬಳ್ಳಿಯ ನೀಲಕಂಠೇಶ್ವರ ಮಠ, ಚನ್ನಪೇಟದ ನಂ. 2 ಶಾಲೆ, ಚೈತನ್ಯ ಪಾರ್ಕ್, ಲಿಂಗರಾಜ ನಗರದ ಸಮುದಾಯ ಭವನ, ಶಾಂತಿ ಕಾಲನಿ, ಮೂರುಸಾವಿರ ಮಠ, ಬ್ಯಾಳಿ ಓಣಿಯಲ್ಲಿ ಪ್ರಚಾರ ಜಾಥಾ ನಡೆಯಿತು. ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರ ನೇತೃತ್ವದಲ್ಲಿ ನಂತರ ಯೋಗ ತರಬೇತಿ ಶಿಬಿರ ನಡೆಯಿತು.
ಮಹಿಳಾ ಘಟಕದ ರಾಜ್ಯ ಪ್ರಭಾರಿ ಆರತಿ ಕಾನಗೋ, ಸುಜಾತ, ಕಿಸಾನ್ ಘಟಕದ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ ಅವರು ಯೋಗದ ಮಹತ್ವ ಹಾಗೂ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ವಿವಿಧ ಭಾಗಗಳಿಂದ ಯೋಗ ಶಿಕ್ಷಕರು ಆಗಮಿಸಿದ್ದರು.