ಹುಬ್ಬಳ್ಳಿ: ವಿದ್ಯಾನಗರ ಟೆಂಡರ್ ಶ್ಯೂರ್ ರಸ್ತೆಯ ಚೇತನ ಪಿಯು ಕಾಲೇಜ್ ಬಳಿ ನಿರ್ವಣಗೊಂಡಿರುವ ಬ್ಯಾಂಕರ್ಸ್ ಭವನದ ಉದ್ಘಾಟನಾ ಸಮಾರಂಭ ಜೂ. 4ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಹುಬ್ಬಳ್ಳಿ ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ. ವಿಜಯಕುಮಾರ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿನಯ ಜವಳಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಗದೀಶ ಮಠದ ಹಾಗೂ ಸುರೇಶ ಎಂಟರ್ಪ್ರೖೆಸಿಸ್ನ ಎಂಡಿ ಸುರೇಶ ಶೇಜವಾಡಕರ ಪಾಲ್ಗೊಳ್ಳುವರು ಎಂದರು.
ಬ್ಯಾಂಕರ್ಸ್ ಕ್ಲಬ್, ಹು-ಧಾ ಬ್ಯಾಂಕ್ ಅಧಿಕಾರಿಗಳ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಇದರಲ್ಲಿ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಸೇವೆಯಲ್ಲಿರುವ ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಸೇರಿ ಸುಮಾರು 400 ಜನ ಸದಸ್ಯರಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಕಾರ್ಪೆರೇಟ್ ಮೀಟಿಂಗ್, ಇನ್ನಿತರ ಸಭೆ, ಸಮಾರಂಭಗಳಿಗೆ ಬ್ಯಾಂಕರ್ಸ್ ಭವನವನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುವುದು. ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ, ಆಡಿಟ್ ಸೇವೆ, ಮನರಂಜನೆಗೆ ಬಳಕೆ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷರಾದ ರಮೇಶ ಪರ್ವತಿಕರ, ಪ್ರದೀಪ ಯಾವಗಲ್, ಕಾರ್ಯದರ್ಶಿ ಬಿ.ಎಸ್. ಬಿರಾದಾರ ಇದ್ದರು.