ಹುಬ್ಬಳ್ಳಿ: ಬಡತನದ ನಡುವೆಯೂ ಕಠಿಣ ಪರಿಶ್ರಮದಿಂದ ಇಲ್ಲಿನ ಗೋಕುಲ ಗ್ರಾಮದ ಯುವಕ, ಆಟೋ ಚಾಲಕನ ಮಗ ಗಿರೀಶ ಮ್ಯಾಗೇರಿ ಜೂನಿಯರ್ ಮಿಸ್ಟರ್ ಇಂಡಿಯಾ ಪಟ್ಟಕ್ಕೆ ಭಾಜನರಾಗಿದ್ದಾರೆ.
ಇಂಡಿಯನ್ ಬಾಡಿ ಬಿಲ್ಡರ್ಸ್ ಫೆಡರೇಷನ್ ವತಿಯಿಂದ ಪುದುಚೇರಿಯಲ್ಲಿ ಇತ್ತೀಚೆಗೆ ಏರ್ಪಾಟಾಗಿದ್ದ 12ನೇ ಜೂನಿಯರ್ ಮಿ.ಇಂಡಿಯಾ ಸ್ಪರ್ಧೆಯಲ್ಲಿ ಗೋಕುಲದ 19 ವರ್ಷದ ಗಿರೀಶ ಮ್ಯಾಗೇರಿ ವಿಜೇತರಾಗಿದ್ದಾರೆ. 21 ವರ್ಷದೊಳಗಿನವರ 75 ಕೆಜಿ ತೂಕದ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ತೆಲಂಗಾಣದ ಬಾಡಿ ಬಿಲ್ಡರ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಗಿರೀಶ ತಂದೆ ಸುರೇಶ ಮ್ಯಾಗೇರಿ ಆಟೋ ಚಾಲಕರಾಗಿದ್ದು, ಬಡತನದ ನಡುವೆಯೂ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಗಿರೀಶ ಇತ್ತೀಚೆಗೆ ದ್ವಿತೀಯ ವರ್ಷದ ಐಟಿಐ ಪರೀಕ್ಷೆ ಬರೆದಿದ್ದಾರೆ. ಕಿಮ್್ಸ ಎದುರಿನ ‘ಐ ಫಿಟ್ನೆಸ್ ಜಿಮ್ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಜತೆಗೆ ಸ್ಪರ್ಧೆಗೆ ತಯಾರಿ ಮಾಡಿಕೊಂಡಿದ್ದರು.
‘ಮೂರೂವರೆ ವರ್ಷಗಳಿಂದ ಸ್ಪರ್ಧೆಗೆ ತಯಾರಿ ನಡೆಸಿದ್ದೆ. ಪ್ರತಿದಿನ ನಾಲ್ಕು ತಾಸು ಜಿಮ್ಲ್ಲಿ ವ್ಯಾಯಾಮ ಮಾಡುತ್ತಿದ್ದೆ. ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸುತ್ತಿದ್ದೆ. ಎಷ್ಟೇ ಕಷ್ಟವಾದರೂ ಬಿಡದೇ ಕುಟುಂಬದವರು, ಸ್ನೇಹಿತರ ಬೆಂಬಲದಿಂದ ಗೆಲುವು ಸಾಧಿಸಿದ್ದೇನೆ. ಸರ್ಕಾರ, ಸಂಘ- ಸಂಸ್ಥೆಯಿಂದ ನೆರವು ನೀಡಿದರೆ ಮತ್ತಷ್ಟು ಸಾಧನೆ ಮಾಡುತ್ತೇನೆ’ ಎಂದು ಗಿರೀಶ ಹೇಳಿದ್ದಾರೆ.