ಜಿಲ್ಲೆ

ಹುಬ್ಬಳ್ಳಿ ಮ್ಯಾರಥಾನ್ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಮುಂಜಾನೆಯ ಚಳಿ ಲೆಕ್ಕಿಸದೆ ಓಟದತ್ತ ದೃಷ್ಟಿ ನೆಟ್ಟು ಆಗಮಿಸಿದ್ದ ಮಕ್ಕಳು, ಹಿರಿಯರು, ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ನ ಅಮೃತ ಮಹೋತ್ಸವ ಹಾಗೂ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ‘ಹುಬ್ಬಳ್ಳಿ ಮ್ಯಾರಥಾನ್-2023’ನ ನಿಗದಿತ ಗುರಿ ತಲುಪಿ ಸಂಭ್ರಮಿಸಿದರು.

‘ನಮ್ಮ ನಡೆ ಭವ್ಯ ಭಾರತದ ಕಡೆ’ ಧ್ಯೇಯದೊಂದಿಗೆ 14 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿತ್ತು. 14 ವರ್ಷದೊಳಗೆ, 15-49 ವಯೋಮಾನ ಹಾಗೂ 50 ವರ್ಷ ಮೇಲ್ಪಟ್ಟವರು (ಮಹಿಳೆಯರು-ಪುರುಷರು) ಭಾಗವಹಿಸಿದ್ದರು.

ಬಿವಿಬಿ ಕ್ಯಾಂಪಸ್​ನ ಮುಖ್ಯ ದ್ವಾರದಿಂದ ಆರಂಭವಾದ ಓಟ ಕೇಶ್ವಾಪುರ, ರೈಲ್ವೆ ಸ್ಟೇಷನ್ ರೋಡ್, ಗೋಕುಲ ರೋಡ್, ತೋಳನಕೆರೆ ಹಾದು ಶ್ರೀಕಾಡಸಿದ್ಧೇಶ್ವರ ಕಾಲೇಜ್ ಮೂಲಕ ಬಿವಿಬಿ ಕಾಲೇಜ್​ನ ಮುಖ್ಯ ದ್ವಾರವನ್ನು ತಲುಪಿತು. ದಾರಿಯುದ್ದಕ್ಕೂ ಜನರು ಪ್ರೋತ್ಸಾಹ ತುಂಬಿದರು. ನಿಗದಿತ ಸ್ಥಳ ತಲುಪಿದ ಬಳಿಕ ಸ್ಪರ್ಧಿಗಳಿಗೆ ಕುಡಿಯುವ ನೀರು, ಚಿಕ್ಕಿ ವಿತರಿಸಲಾಯಿತು. ಆರೂವರೆ ಸಾವಿರಕ್ಕೂ ಅಧಿಕ ಜನರು ಮ್ಯಾರಥಾನ್​ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಮೋದಿ ಮಾತು ಪ್ರೇರಕ

‘ಹುಬ್ಬಳ್ಳಿ ಮ್ಯಾರಥಾನ್-2023’ಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ಮಾತುಗಳು ಯುವಕರನ್ನು ಸೆಳೆದಿವೆ. ಸದೃಢ ಭಾರತ ನಿರ್ವಣಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ಮುಂಜಾನೆಯ ಚಳಿ ಲೆಕ್ಕಿಸದೇ ಮ್ಯಾರಥಾನ್​ಗೆ ಬಂದಿರುವುದನ್ನು ನೋಡಿದರೆ, ನಿಮ್ಮಲ್ಲಿರುವ ಸ್ಪೂರ್ತಿಯೇ ಕಾರಣ ಎಂದು ಬಣ್ಣಿಸಿದರು.

ಕೆಎಲ್​ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ಡೀನ್ ಡಾ. ಸಂಜಯ ಕೊಟಬಾಗಿ, ಪ್ರೊ.ಬಿ.ಎಲ್. ದೇಸಾಯಿ, ಡಾ.ಪಿ.ಜಿ. ತೆವರಿ, ಡಾ.ಬಿ.ಎಸ್. ಅನಾಮಿ, ಬಿಜೆಪಿ ಮುಖಂಡ ವೀರೇಶ ಸಂಗಳದ ಇತರರು ಇದ್ದರು.