ಹುಬ್ಬಳ್ಳಿ: ಬಿಜೆಪಿ ಮುಖಂಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಗೋಕುಲ ರಸ್ತೆ ಜೆ.ಪಿ. ನಗರ ನಿವಾಸಿ ರಾಘವೇಂದ್ರ ಭೀಮರಾವ್ ರಾಮದುರ್ಗ (67) ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ ಹಾಗೂ ಅಪಾರ ಬಂಧುಗಳಿದ್ದಾರೆ.
10 ದಿನಗಳ ಹಿಂದೆ ಕರೊನಾ ಗೆದ್ದು ಬಂದಿದ್ದ ಅವರು ಕಳೆದ ಭಾನುವಾರವಷ್ಟೇ 68ನೇ ಜನ್ಮದಿನ ಆಚರಿಸಿಕೊಂಡಿದ್ದರು. 2007-12ರ ಅವಧಿಯಲ್ಲಿ ಪಾಲಿಕೆಯ 40ನೇ ವಾರ್ಡ್ ಸದಸ್ಯರಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. 2014ರಲ್ಲಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಒಮ್ಮೆ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದರು.
ಜನಧನ ಯೋಜನೆಯಡಿ ಬ್ಯಾಂಕ್ ಖಾತೆ ಮಾಡಿಸುವುದು, ಮುದ್ರಾ, ವಾಲ್ಮೀಕಿ-ಅಂಬೇಡ್ಕರ್ ಆವಾಸ್, ಉಜ್ವಲಾ, ಹಕ್ಕು ಪತ್ರ ವಿತರಣೆ ಸೇರಿ ಕೇಂದ್ರ-ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ರಾಮದುರ್ಗ ಅವರು ಸಾಕಷ್ಟು ಶ್ರಮಿಸಿದ್ದರು. ಪಾಲಿಕೆ ಸದಸ್ಯರಾಗಿಲ್ಲದ ಅವಧಿಯಲ್ಲೂ ವಾರ್ಡ್ನಲ್ಲಿ ಮೂಲಸೌಕರ್ಯ ಕಲ್ಪಿಸಲು ಪ್ರಯತ್ನಿಸಿದ್ದರು. ಕರೊನಾ ಲಾಕ್ಡೌನ್ ಅವಧಿಯಲ್ಲಿ ಸಂಘ-ಸಂಸ್ಥೆಗಳ ನೆರವಿನಿಂದ ಆಹಾರ ಸಾಮಗ್ರಿ ಕಿಟ್ ವಿತರಿಸಿದ್ದರು. ಮೈಸೂರು ಕಿಲೋಸ್ಕರ್ದಲ್ಲಿ 25 ವರ್ಷ ಕೆಲಸ ಮಾಡಿದ್ದರು.
ನಾಟಕಕಾರ, ಕಲಾವಿದ: ರಾಘವೇಂದ್ರ ರಾಮದುರ್ಗ ಅವರು ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು. ಇತಿಹಾಸ ಚಕ್ರ, ಟಿಂಗರ ಬುಡ್ಡಣ್ಣ ನಾಟಕ, ಸಾವಿತ್ರಿಬಾಯಿ ಪುಲೆ ಹಾಗೂ ಶ್ರೀ ಸಿದ್ಧಾರೂಢ ಮಹಾತ್ಮೆ ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಪ್ರಕಾಶ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ‘ಅವರು ರಾಜಕಾರಣಿಯಷ್ಟೇ ಅಲ್ಲ, ನಾಟಕ, ಸಂಗೀತ, ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದರು’ ಎಂದು ನೂಪುರ ನೃತ್ಯ ವಿಹಾರದ ಅಧ್ಯಕ್ಷ ಎಚ್.ಎಸ್. ಕಿರಣ ಸ್ಮರಿಸಿದರು.
ಅಂತ್ಯಕ್ರಿಯೆ: ಸಂಜೆ ಆನಂದ ನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಇತರರು ಪಾಲ್ಗೊಂಡಿದ್ದರು.
ಸಂತಾಪ: ‘ರಾಘವೇಂದ್ರ ರಾಮದುರ್ಗ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಎಲ್ಲ ಸಮಯದಲ್ಲೂ ನಮ್ಮೊಂದಿಗಿರುತ್ತಿದ್ದರು’ ಎಂದು ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.
ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಧಾರವಾಡ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾ ವಕ್ತಾರ ರವಿ ನಾಯ್ಕ, ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಾಜಿ ಸಂಸದ ಐ.ಜಿ. ಸನದಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಕಾಂಗ್ರೆಸ್ನ ರಾಜಶೇಖರ ಮೆಣಸಿನಕಾಯಿ, ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಸಾಪ ಹುಬ್ಬಳ್ಳಿ ಗ್ರಾಮೀಣ ತಾಲೂಕು ಅಧ್ಯಕ್ಷ ರಾಮು ಮೂಲಗಿ ಅವರು, ರಾಘವೇಂದ್ರ ರಾಮದುರ್ಗ ಶ್ರಾವಣ ಜಾನಪದ ಸೇರಿದಂತೆ ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಕರೊನಾ ಗೆದ್ದು ಬಂದರು ಎಂದು ನಾವೆಲ್ಲ ಸಂತಸ ಪಟ್ಟುಕೊಳ್ಳುತ್ತಿರುವಾಗಲೇ ನಿಧನ ಹೊಂದಿರುವುದು ಅತ್ಯಂತ ಖೇದ ಉಂಟು ಮಾಡಿದೆ. ಅವರ ಅಗಲಿಕೆ ಸಾಹಿತ್ಯಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಹಾನಿ ಉಂಟು ಮಾಡಿದೆ ಎಂದು ಶೋಕಿಸಿದ್ದಾರೆ.