ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ/ಶಿರಸಿ: ಕರಾವಳಿ ಹಾಗೂ ಬಯಲುಸೀಮೆಯನ್ನು ಬೆಸೆಯುವ ಬಹು ನಿರೀಕ್ಷಿತ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ವಣಕ್ಕೆ ಒಪ್ಪಿಗೆ ನೀಡದಿರಲು ವನ್ಯಜೀವಿ ಮಂಡಳಿ ಸಭೆ ನಿರ್ಧಾರ ಕೈಗೊಂಡಿರುವುದಕ್ಕೆ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಇಟ್ಟ ಯೋಜನೆಗೆ ಈಗ ಅದೇ ಪಕ್ಷದ ಸರ್ಕಾರ ವಿರೋಧ ಮಾಡುತ್ತಿದೆ. ಇದು ದುರ್ದೈವದ ಸಂಗತಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸ್ಥಳೀಯ ನಾಯಕರು ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿರುವುದನ್ನು ಹುಬ್ಬಳ್ಳಿ- ಅಂಕೋಲಾ ರೈಲು ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸಿದೆ. ಕಳೆದೆರಡು ದಶಕಗಳಿಂದ ಯೋಜನೆ ಅನುಷ್ಠಾನ ಆಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಉಭಯ ಜಿಲ್ಲೆಯ ಜನತೆಗೆ ಮಂಡಳಿಯ ನಿರ್ಧಾರದಿಂದ ತಣ್ಣೀರೆರಚಿದಂತಾಗಿದೆ.
ಪರಿಸರ ಹಾನಿ ಕಡಿಮೆಯಾಗುವಂತೆ ಮರು ವಿನ್ಯಾಸ ಮಾಡಲಾಗಿದೆ. ಆದರೆ, ಯಾರದ್ದೋ ಲಾಬಿಗೆ ವನ್ಯಜೀವಿ ಮಂಡಳಿ ಮಣಿದಿದೆ. ಹೀಗಾಗಿ, ಯೋಜನೆಯನ್ನು ಕೈಬಿಡಲು ಸರ್ಕಾರ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯದ ಅರಿವಿಲ್ಲದ ಮಂಡಳಿಯ ಸದಸ್ಯರು ಹಾನಿಯ ಕುರಿತು ಮಾತನಾಡುವುದು ಹಾಸ್ಯಾಸ್ಪದ. ವನ್ಯಜೀವಿ ಮಂಡಳಿಯಲ್ಲಿ ಪ್ರಸ್ತುತ ಕಡಿಯಬೇಕಾದ ಮರಗಳು, ವನ್ಯಜೀವಿಗಳ ಅಂಕಿ-ಅಂಶಗಳಿಲ್ಲ. 25 ವರ್ಷದ ಹಿಂದಿನ ಅಂಕಿ-ಅಂಶದ ಲೆಕ್ಕಾಚಾರ ಮುಂದಿಟ್ಟು ಯೋಜನೆ ಸ್ಥಗಿತಕ್ಕೆ ಮುಂದಾಗಿದ್ದು ತಪ್ಪು. ಪರಿಷ್ಕೃತ ನೀಲಿನಕ್ಷೆ ಪ್ರಕಾರ ರೈಲು ಮಾರ್ಗಕ್ಕಾಗಿ ಕಡಿಯುವ ಮರಗಳ ಸಂಖ್ಯೆ ಕೂಡ ಕಡಿಮೆಯಿದೆ. ಹಾಗಾಗಿ ಮರಗಳು, ವನ್ಯಜೀವಿಗಳಿಗೆ ಹೆಚ್ಚಿನ ಹಾನಿಯಾಗದು. ಕಾಲು ಶತಮಾನದ ಹಿಂದಿನ ಅಂಕಿ-ಅಂಶವಿಟ್ಟು ಬಹುಬೇಡಿಕೆಯ ಯೋಜನೆ ನಿಲ್ಲಿಸಲು ಮುಂದಾಗಿರುವುದು ಅಕ್ಷಮ್ಯ’ ಎಂದು ಹುಬ್ಬಳ್ಳಿ- ಅಂಕೋಲಾ ರೈಲು ಹೋರಾಟ ಕ್ರಿಯಾ ಸಮಿತಿ ಪ್ರಮುಖರು ಅಸಮಾಧಾನ ಹೊರಹಾಕಿದ್ದಾರೆ.
ಈಗಾಗಲೇ ಕೇಂದ್ರದ ರೈಲು ಸಚಿವರು ಈ ಯೋಜನೆ ಅನುಷ್ಠಾನದ ಭರವಸೆ ನೀಡಿದ್ದಾರೆ. ಹಾಗಾಗಿ ಮಂಡಳಿಯ ನಿರ್ಧಾರ ಬಾಧಿಸುವುದಿಲ್ಲ. ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ವಾಸ್ತವಾಂಶ ಮುಂದಿಟ್ಟು ಯೋಜನೆಯನ್ನು ಅನುಷ್ಠಾನ ಮಾಡಿಸಲು ಪ್ರಯತ್ನಿಸುತ್ತೇವೆ. ನಿರಂತರ ಹೋರಾಟ ಕೂಡ ಮಾಡುತ್ತೇವೆ ಎಂದು ಸಮಿತಿಯ ಪ್ರಮುಖರು ಹೇಳಿದ್ದಾರೆ.
ಪ್ರಗತಿ ಹಾಗೂ ಅಭಿವೃದ್ಧಿಯ ಹೊಸ್ತಿಲಿನಲ್ಲಿರುವ ಉತ್ತರ ಕನ್ನಡದಿಂದ ಈ ಯೋಜನೆ ಕೈತಪ್ಪಿಸುತ್ತಿರುವುದು ವನ್ಯಜೀವಿ ಮಂಡಳಿಗೆ ಶೋಭೆ ತರುವುದಿಲ್ಲ. ಯಾವುದೇ ಕಾರಣಕ್ಕೂ ಮಂಡಳಿಯ ಈ ನಿರ್ಧಾರ ತಪ್ಪು. ದೇಶದಲ್ಲಿ ಪ್ರಗತಿ ಮತ್ತು ಅಭಿವೃದ್ಧಿ ಹೆಸರಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಆದರೆ, ಈ ಯೋಜನೆಯೊಂದೇ ಪರಿಸರಕ್ಕೆ ಹಾನಿ ಎಂಬಂತೆ ವರ್ತಿಸಲಾಗುತ್ತಿದೆ. ರಾಜ್ಯದಲ್ಲಿ ಸಾಕಷ್ಟು ಭೂಮಿಯಿದ್ದು ಪರ್ಯಾಯವಾಗಿ ಮರ ಬೆಳೆಸಲೂ ಅವಕಾಶವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಡಿಗಲ್ಲು ಇಟ್ಟ ಯೋಜನೆಗೆ ಬಿಜೆಪಿ ಸರ್ಕಾರವೇ ವಿರೋಧ ಮಾಡುತ್ತಿರುವುದು ದುರ್ದೈವ. ಪರಿಸರ ಹಾನಿಯಾಗುತ್ತದೆ ಎಂಬುದು ಯೋಜನೆ ಕೈಬಿಡಲು ಮೂಲ ಕಾರಣವಲ್ಲ. ರಾಜಕೀಯ ಇಚ್ಛಾಶಕ್ತಿ ಇಲ್ಲಿ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ. | ಪ್ರಮೋದ ಹೆಗಡೆ ಬಿಜೆಪಿ ರಾಜ್ಯ ವಕ್ತಾರ
ಕರಾವಳಿ ಮತ್ತು ಒಳನಾಡನ್ನು ಬೆಸೆಯುವ ಮಹತ್ವದ ಯೋಜನೆ ಇದು. ಬಯಲು ಸೀಮೆ ಪ್ರದೇಶವನ್ನು ಪ್ರಮುಖ ವಾಣಿಜ್ಯ ಬಂದರುಗಳೊಂದಿಗೆ ಬೆಸೆಯುವ ಯೋಜನೆಯಾಗಿರುವುದರಿಂದ ಈ ಭಾಗದಲ್ಲಿ ರಫ್ತು ವಹಿವಾಟು ಹೆಚ್ಚಿ, ಆರ್ಥಿಕ ಚಟುವಟಿಕೆ ಚುರುಕುಗೊಳ್ಳಲು ಇದನ್ನು ಜಾರಿ ಮಾಡುವುದು ಅಗತ್ಯ. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ 60 ವರ್ಷದಿಂದ ಈ ಯೋಜನೆ ಜಾರಿಗೆ ಪ್ರಯತ್ನಿಸುತ್ತ ಬಂದಿದೆ. ಯೋಜನೆಯಿಂದ 2.5 ಲಕ್ಷ ಮರ ಕಟಾವಾಗುತ್ತವೆ. ಅದರ ಬದಲಿಗೆ 4 ಪಟ್ಟು ಗಿಡ ನೆಟ್ಟು ಬೆಳೆಸುವ ಪ್ರಸ್ತಾವ ಇದೆ. ಪರಿಸರ ನಾಶ ತಡೆಗಟ್ಟುವ ಪರ್ಯಾಯ ಕ್ರಮಗಳಿವೆ. ವನ್ಯಜೀವಿ ಮಂಡಳಿ ಇದಾವುದನ್ನೂ ಗಣನೆಗೆ ತೆಗೆದು ಕೊಳ್ಳದೇ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ. ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಲಿದ್ದೇವೆ. | ಮಹೇಂದ್ರ ಲದ್ದಡ ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ