ಜಿಲ್ಲೆ

ಹುತ್ರಿದುರ್ಗ ಬೆಟ್ಟದಲ್ಲಿ ಮರಗಳ ಮಾರಣಹೋಮ

ತುಮಕೂರು ಡೆಸ್ಕ್

ಹುತ್ರಿದುರ್ಗ: ಕುಣಿಗಲ್​ ತಾಲೂಕಿನ ಐತಿಹಾಸಿಕ ಪ್ರವಾಸಿತಾಣ ಹುತ್ರಿದುರ್ಗ ಬೆಟ್ಟದ ಬುಡದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ.

ಇತ್ತೀಚೆಗೆ ನಡೆದ ಕೆಂಪೇಗೌಡರ ಜಯಂತಿಯಂದೇ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ಕೋಟೆ ಬಾಗಿಲಿಗೆ ಹೊಂದಿಕೊಂಡಂತೆ ಇದ್ದ ಮರಗಳನ್ನು ಕಡಿಯಲಾಗಿತ್ತು. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಶಾಸಕರ ಗಮನಕ್ಕೂ ತಂದರೂ ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ. ಈ ಘಟನೆ ಮಾಸುವ ಮುನ್ನವೇ ಬೆಟ್ಟದ ತಪ್ಪಲಿನಲ್ಲಿ ಮತ್ತೆ ಮರಗಳನ್ನು ಕಡಿಯಲಾಗಿದೆ. ಈ ಹಿಂದೆ ಅನುಮತಿ ಪಡೆದೆ ಕಲ್ಲು ಬಂಡೆ ಸ್ಫೋಟಿಸಿ ಗಿಡ&ಮರ ಕತ್ತರಿಸಲಾಗಿತ್ತು, ಆದರೆ ಇದುವರೆಗೂ ಅಕ್ರಮ ಎಸಗಿರುವವರ ವಿರುದ್ಧ ಕ್ರಮವಾಗಿಲ್ಲ. ಐತಿಹಾಸಿಕ ಪ್ರವಾಸಿತಾಣದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಕಾರ್ಯ ಮಾಡಲಾಗಿದೆ. ಆದರೆ ಪಾರಂಪರಿಕ ತಾಣದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳದಿರುವುದು ದುರ್ದೈವ. ಪುರಾತತ್ವ ಇಲಾಖೆಯ ವ್ಯಾಪ್ತಿಯ ಹುತ್ರಿದುರ್ಗ ಬೆಟ್ಟದ ತಪ್ಪಲಿನಲ್ಲಿ ಇತ್ತೀಚೆಗೆ ಭೂ ಗಳ್ಳರ ಹಾವಳಿ ಹೆಚ್ಚುತ್ತಿದ್ದು, ಬೆಟ್ಟದ ಬುಡದಲ್ಲಿ ಜೆಸಿಬಿ ಯಂತ್ರ ಬಳಸಿ ಭೂಮಿ ಸಮತಟ್ಟು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಭೂ ಕುಸಿತ ಉಂಟಾದರು ಆಶ್ಚರ್ಯ ಪಡಬೇಕಿಲ್ಲ. ಇನ್ನದಾರೂ ಸಂಬಂಧಿಸಿದ ಅಧಿಕಾರಿಗಳುಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.