ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ಹುತ್ತೂರು ಗ್ರಾಮದ ಶ್ರೀ ಮಲೆ ಮಹದೇಶ್ವರಸ್ವಾಮಿ ಮಠದ ವತಿಯಿಂದ ಬುಧವಾರ ಗಂಗೆಪೂಜೆ ಹಾಗೂ ಹಾಲರವಿ ಉತ್ಸವವನ್ನು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
3ನೇ ವರ್ಷದ ಹಾಲರವಿ ಉತ್ಸವದ ಹಿನ್ನೆಲೆಯಲ್ಲಿ ಮಠವನ್ನು ತಳಿರು, ತೋರಣ, ವಿವಿಧ ಪುಷ್ಪ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನ ಜಾವ ಮಠದಲ್ಲಿ ಸಾಲೂರು ಬೃಹನ್ಮಠದ ಅರ್ಚಕರಿಂದ ಗಣಪತಿ ಹೋಮ, ರುದ್ರ ಹೋಮ, ನವಗ್ರಹ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಲಾಯಿತು. ಲಿಂಗಮೂರ್ತಿ ಹಾಗೂ ಮಾದಪ್ಪ ರಾಗಿ ಬೀಸಿದ ಕುರುಹಾಗಿ ಉಳಿದಿರುವ ರಾಗಿ ಕಲ್ಲಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಉಪವಾಸವಿದ್ದ ಮಾದಪ್ಪನ ದೇವರ ಗುಡ್ಡರು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಹಾಲಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿ ಕಳಸದಲ್ಲಿ ಗಂಗೆಯನ್ನು ತಂದರು. ಗ್ರಾಮದ ದೊಡ್ಡಕೆರೆಯ ಏರಿಯ ಕಟ್ಟೆಯಲ್ಲಿ ಕಳಸವನ್ನಿಟ್ಟು ಗ್ರಾಮಸ್ಥರು ಹಾಗೂ ಭಕ್ತರ ಸಮ್ಮುಖದಲ್ಲಿ ಗಂಗೆಪೂಜೆ ನೆರವೇರಿಸಲಾಯಿತು.
ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ಮಂಗಳ ವಾದ್ಯದೊಂದಿಗೆ ದೇವರ ಗುಡ್ಡರ ಜತೆಗೆ ನವನವೀನ ಉಡುಗೆತೊಟ್ಟ 101 ಹೆಣ್ಣು ಮಕ್ಕಳು ಕುಂಭಕಳಸವನ್ನು ಹೊತ್ತು ಬಸ್ ನಿಲ್ದಾಣ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮಠಕ್ಕೆ ಆಗಮಿಸಿದರು. ಮಠದ ಲಿಂಗಮೂರ್ತಿಗೆ ಮಜ್ಜನ ಸೇವೆ ನೆರವೇರಿಸಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು. ಈ ಮೂಲಕ ಗ್ರಾಮದಲ್ಲಿ ಹಾಲರವಿ ಉತ್ಸವವು ವಿಜೃಂಭಣೆಯಿಂದ ನೆರವೇರಿತು. ಮಠದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಗಿತ್ತು.
ಹಾಲರವಿ ಉತ್ಸವದ ಹಿನ್ನೆಲೆಯಲ್ಲಿ ಮ.ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹುತ್ತೂರು ಹಾಗೂ ಸಾಲೂರು ಮಠಕ್ಕಿರುವ ಗುರುಪರಂಪರೆಯನ್ನು ಬಣ್ಣಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಕ್ತರಿಗೆ ಆಶೀರ್ವಾದ ನೀಡಿದರು. ಮಠದ ವತಿಯಿಂದ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು. ಈ ವೇಳೆ ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಇತರ ಶ್ರೀಗಳು ಇದ್ದರು.