ಹಾಸನ: ಪ್ರತಿವರ್ಷದಂತೆ ಈವರ್ಷವೂ ಕೂಡ ನಾಗರ ಪಂಚಮಿ ಪ್ರಯುಕ್ತ ನಗರದ ಮಹಾರಾಜ ಉದ್ಯಾನವನದಲ್ಲಿ ಸೋಮವಾರ ಹುತ್ತಕ್ಕೆ ಹಾಲೆರೆದು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪಡುವ ಈ ಹಬ್ಬ ಮುಂದೆ ಬರಲಿರುವ ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ನವರಾತ್ರಿ ಎಲ್ಲ ಶುಭ ಆಚರಣೆಗಳಿಗೆ ಮೊದಲ ಮೆಟ್ಟಿಲು ಆಗಿದೆ. ನಾಗರ ಪಂಚಮಿಗೆ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅಷ್ಟೇ ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ ದಿನವಾಗಿದೆ. ಇನ್ನು ಅಣ್ಣ-ತಂಗಿಯರ ಬಾಂಧವ್ಯವು ಗಟ್ಟಿಯಾಗಿರಲೆಂದು ಹುತ್ತಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ನಾಗರ ಪಂಚಮಿ ದಿನದಂದು ಹುತ್ತಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿದರೇ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.