ಜಿಲ್ಲೆ

ಹುತಾತ್ಮ ಯೋಧ ದಿವಿನ್ ಅಂತ್ಯಕ್ರಿಯೆ ಇಂದು

ಶನಿವಾರಸಂತೆ: ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನ ಪ್ರಪಾತಕ್ಕೆ ಉರುಳಿ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಸೋಮವಾರಪೇಟೆ ತಾಲೂಕು ಆಲೂರು ಸಿದ್ದಾಪುರ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್ ಅಂತ್ಯಕ್ರಿಯೆ ಮಂಗಳವಾರ ಸ್ವಗ್ರಾಮದಲ್ಲಿ ನಡೆಯಲಿದೆ.

ಸೋಮವಾರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪಾರ್ಥಿವ ಶರೀರವನ್ನು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಇಡಲಾಯಿತು. ವೈದ್ಯರಿಂದ ಮರಣ ದೃಢೀಕರಣ ಪತ್ರ, ಪಾರ್ಥಿವ ಶರೀರವನ್ನು ಪಾಲಕರಿಗೆ ಒಪ್ಪಿಸಿದರು. ಪಾರ್ಥಿವ ಶರೀರವನ್ನು ಶ್ರೀನಗರದಿಂದ ಬೆಂಗಳೂರಿಗೆ ವಿಮಾನದಲ್ಲಿ ತಂದು ಅಲ್ಲಿಂದ ಸೇನಾ ವಾಹನದಲ್ಲಿ ತವರಿಗೆ ತರಲಾಗುವುದು. ಮೈಸೂರಿನಲ್ಲಿ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾರ್ಥಿವ ಶರೀರವನ್ನು ಬರ ಮಾಡಿಕೊಳ್ಳುವರು. ಕುಶಾಲಗರದಲ್ಲಿ ಕೆಲಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಳಗ್ಗೆ 7 ಗಂಟೆಗೆ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಬರುವ ನಿರೀಕ್ಷೆ ಇದೆ. ಮಂಗಳವಾರ ಆಲೂರು ಸಿದ್ದಾಪುರದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ನಂತರ ಮಾಲಂಬಿ ಗ್ರಾಮದ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದಿವಿನ್ ಮರಾಠ ರಿಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಮರಾಠ ರಿಜಿಮೆಂಟ್ ತರಬೇತಿ ಕೇಂದ್ರದ ಅಧಿಕಾರಿಗಳ ತಂಡ ಸೇನಾ ಗೌರವ ಸಲ್ಲಿಸಲಿದೆ. ಫೆಬ್ರವರಿಯಲ್ಲಿ ಹಸೆಮಣೆ ಏರಬೇಕಿತ್ತು 2013ರಲ್ಲಿ ಸೇನೆಗೆ ಸೇರಿದ ಯೋಧ ದಿವಿನ್‌ಗೆ ಪಿರಿಯಾಪಟ್ಟಣದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. 2025ರ ಫೆಬ್ರವರಿ 23ಕ್ಕೆ ವಿಹಾಹವೂ ನಿಗದಿಯಾಗಿತ್ತು. ದಿವಿನ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಆಲೂರು ಸಿದ್ದಾಪುರದಲ್ಲಿ, ಶನಿವಾರಸಂತೆ ಭಾರತಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ಶಾಸ್ತ್ರ ಮುಗಿಸಿ ಬಿಕಾಂ ಮೊದಲ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಸೇನೆಗೆ ಆಯ್ಕೆಯಾದರು. ತಂದೆ ಪಳಂಗೋಟು ಪ್ರಕಾಶ್ ಕಳೆದ ಏಪ್ರಿಲ್‌ನಲ್ಲಿ ನಿಧನರಾದರು. ದಿವಿನ್ ಒಬ್ಬನೇ ಪುತ್ರನಾಗಿದ್ದು, ತಾಯಿ ಜಲಜಾಕ್ಷಿ ಈಗ ಪುತ್ರನನ್ನು ಕಳೆದುಕೊಂಡಿದ್ದಾರೆ. ಅಲ್ಲದೆ, ಮಾಲಂಬಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಜಿಲ್ಲಾಡಳಿತ ಹುತಾತ್ಮ ಯೋಧ ದಿವಿನ್ ಪಾರ್ಥಿವ ಶರೀರವನ್ನು ಗೌರಯುತವಾಗಿ ಬರ ಮಾಡಿಕೊಳ್ಳಲಿದೆ. ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಈ ಸಂಬಂಧ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ತಿಳಿಸಿದ್ದಾರೆ. --------------

ದಿವಿನ್ ನನ್ನ ಅಣ್ಣನ ಮಗ. ತುಂಬಾ ಒಳ್ಳೆಯ ಹುಡುಗನಾಗಿದ್ದ. ಚಿಕ್ಕ ವಯಸ್ಸಿನಲ್ಲಿ ದೇಶ ಸೇವೆ ಸಲ್ಲಿಸುತ್ತಿದ್ದ ಅವನ ಸಾವು ನಮ್ಮ ಕುಟುಂಬಕ್ಕೆ ದುಃಖ ತಂದಿದೆ. ದಿವಿನ್ ಅಂತ್ಯಕ್ರಿಯೆ ತೋಟದಲ್ಲಿ ನಡೆಸಲು ಕುಟುಂಬಸ್ಥರು, ಗ್ರಾಮಸ್ಥರು, ಬಂಧುಗಳು ಸಿದ್ಧತೆ ಮಾಡಿಕೊಂಡಿದ್ದೇವೆ. ಪಳಂಗೋಟು ಶ್ರೀಧರ್, ದಿವಿನ್ ಚಿಕ್ಕಪ್ಪ, ಮಾಲಂಬಿ -------- ದಿವಿನ್ ಪ್ರೌಢಶಾಲೆಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ. ಅವನು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂಬುವುದನ್ನು ತಿಳಿದು ತುಂಬಾ ಸಂತೋಷಗೊಂಡಿದ್ದೆ. ಆದರೆ, ಈಗ ಅವನು ವೀರಮರಣ ಹೊಂದಿರುವುದು ತಿಳಿದು ಸಂಕಟವಾಗುತ್ತಿದೆ. ಮಲ್ಲೇಶ್, ಉಪನ್ಯಾಸಕ, ಸರ್ಕಾರಿ ಪಪೂ ಕಾಲೇಜು ಆಲೂರು ಸಿದ್ದಾಪುರ