ಹುಣಸೂರು: ಹುಣಸೂರು ರೋಟರಿ ಸಂಸ್ಥೆಯ ಸಾಮಾಜಿಕ ಸೇವೆ ಪರಿಗಣಿಸಿ ಡೈಮಂಡ್ ಪ್ಲಸ್ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಕೆ.ಪಿ.ಪ್ರಸನ್ನ ತಿಳಿಸಿದರು.
ಇತ್ತೀಚೆಗೆ ಮಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಪ್ರಶಸ್ತಿ ಪ್ರದಾನ ಮಾಡಿದ್ದು, ಹುಣಸೂರು ರೋಟರಿ ಸಂಸ್ಥೆ ವಲಯ 6ರ ಪ್ರತಿಷ್ಠಿತ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.
ಸೇವೆಗಳು: ಹುಣಸೂರು ರೋಟರಿ ಕ್ಲಬ್ 2024-25ನೇ ಸಾಲಿಗಾಗಿ ವೈಶಿಷ್ಟ್ಯಪೂರ್ಣ ಸಾಮಾಜಿಕ ಸೇವೆಗಳನ್ನು ನೀಡಿದೆ. ಮುಖ್ಯವಾಗಿ ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ದಾನಿಗಳು ಮತ್ತು ಹಿರಿಯ ರೊಟೇರಿಯನ್ನರ ಆರ್ಥಿಕ ಸಹಕಾರದೊಂದಿಗೆ 5 ಲಕ್ಷ ರೂ.ಮೌಲ್ಯದ ರಸಾಯನಶಾಸ್ತ್ರ ವಿಭಾಗದ ಪ್ರಯೋಗಾಲಯ ಸ್ಥಾಪಿಸಿದೆ. ತಾಲೂಕಿನ ಕೊಟ್ಟಿಗೆಕಾವಲ್ ಗ್ರಾಮದಲ್ಲಿ ಸ್ಥಾಪಿಸಿದ್ದ ಬಸ್ ತಂಗುದಾಣದ ದುರಸ್ತಿ, ಅಂಗನವಾಡಿ ಕೇಂದ್ರಗಳಿಗೆ ವಿವಿಧ ಸಲಕರಣೆಗಳ ವಿತರಣೆ, ಸರ್ವೈಕಲ್ ಕ್ಯಾನ್ಸರ್ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ತಾಲೂಕಿನ ಸಿಬಿಟಿ ಕಾಲನಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ, ಮಳೆಯಿಂದ ಹಾನಿಗೊಳಗಾದ ತಾಲೂಕಿನ ಹೆಮ್ಮಿಗೆ ಹಾಡಿಯ ಗಿರಿಜನರ ಕುಟುಂಬದ ಮನೆಯ ನಿರ್ಮಾಣಕ್ಕಾಗಿ 20 ಸಾವಿರ ರೂ.ಆರ್ಥಿಕ ನೆರವು ಸೇರಿದಂತೆ 150ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದೆ.