ಜಿಲ್ಲೆ

ಹುಣಸೂರು ತಾಲೂಕಿನ ಜನರ ಬದುಕಿನ ಸೂತ್ರಧಾರ

ಧರ್ಮಾಪುರ: ನಾನು ಎಂದಿಗೂ ಅಭಿವೃದ್ಧಿಯ ಸರದಾರನಾಗಲು ಬಯಸಿಲ್ಲ. ಬದಲಾಗಿ ತಾಲೂಕಿನ ಜನರ ಬದುಕಿನ ಸೂತ್ರಧಾರನಾಗಲು ಬಯಸಿದ್ದೇನೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಭಾವುಕವಾಗಿ ಹೇಳಿದರು.

ತಾಲೂಕಿನ ಮಾದಳ್ಳಿ ಉಕ್ಕಿನಕಂತೆ ಮಠದಲ್ಲಿ 224ನೇ ಅಮಾವಾಸ್ಯೆ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ತಾಲೂಕಿನ ಜನರ ಸಮಸ್ಯೆಗಳಿಗೆ ಪರಿಹಾರ ಮಾಡುತ್ತ ಬಂದಿದ್ದೇನೆ. ನನ್ನ ಕೆಲಸಗಳು ಸಮಾಧಾನ ನೀಡಿವೆ. ಸರ್ಕಾರದ ಅನುದಾನದ ಮೂಲಕ ಹಾಗೂ ವೈಯಕ್ತಿಕವಾಗಿ ತಾಲೂಕಿಗೆ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಜತೆಗೆ ಜನತೆಯಲ್ಲಿ ಸಾಮರಸ್ಯ ಬೆಸೆದಿದ್ದೇನೆ ಎಂದರು.

ಇಲ್ಲಿವರೆಗೂ ತಾಲೂಕಿಗೂ ತಮಗೂ ಸಂಬಂಧವಿಲ್ಲದಂತೆ ಎಲ್ಲೋ ದೂರ ಇದ್ದವರು, ಇಂದು ತಮ್ಮ ರಾಜಕಿಯ ಸ್ವಾರ್ಥಕ್ಕಾಗಿ ಹಣದ ಆಸೆ ತೋರಿಸುತ್ತ ಜನರನ್ನು ದಿಕ್ಕು ತಪ್ಪಿಸುತ್ತ, ಜಾತಿ ಧರ್ಮಗಳ ಮೂಲಕ ಒಡಕು ಉಂಟುಮಾಡುತ್ತಿರುವುದು ದುರಂತ. ಮಾದಳ್ಳಿ ಮಠ ತಾಲೂಕಿನ ಅಸ್ಮಿತೆ. ಯಾರು ಕೂಡ ಧಾರ್ಮಿಕ ಪೂಜಾ ಕಾರ್ಯದಲ್ಲಿ ರಾಜಕೀಯ ಬೆರಸಬಾರದು. ಇದು ರಾಜಕೀಯ ಮಾಡುವ ಮತ್ತು ಮಾತನಾಡುವ ವೇದಿಕೆಯಲ್ಲ. ಆದರೂ ಕೆಲವರು ರಾಜಕೀಯ ವೇದಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಮಠದ ಇತಿಹಾಸವನ್ನು ಸಾರುವ ಬಸವ ಭಾರತ ಎಂಬ ಕೃತಿಯನ್ನು ಶಾಸಕರು ಬಿಡುಗಡೆ ಮಾಡಿದರು. ಮಠದ ಪೀಠಾಧ್ಯಕ್ಷ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂದನಹಳ್ಳಿ ಸೋಮಶೇಖರ್, ಜಿಪಂ ಮಾಜಿ ಉಪಾಧ್ಯಕ್ಷೆ ರಾಧಾ ಗೌರಮ್ಮ, ಬಸವ ಸಮಿತಿ ಅಧ್ಯಕ್ಷ ಕೂಸಪ್ಪ, ಗುರುಸ್ವಾಮಿ, ಬಸವರಾಜಪ್ಪ, ರಮೇಶ್, ದೇವರಾಜ್, ಪುಟ್ಟರಾಜ, ವಜ್ರಮ್ಮ, ಶೋಭಾ ಇತರರು ಇದ್ದರು.