ಹುಣಸೂರು ನಗರದಲ್ಲಿ ಪುನೀತ್ ರಾಜ್‌ಕುಮಾರ್ ಮೊದಲ ಪುಣ್ಯಸ್ಮರಣೆ ಅಂಗವಾಗಿ ಆಟೋಗಳಲ್ಲಿ ಅಪ್ಪು ಭಾವಚಿತ್ರ ಮೆರವಣಿಗೆಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು. ಕಲ್ಕುಣಿಕೆ ರಾಘು, ನಾಗರಾಜ್ ಇತರರು ಇದ್ದರು. 
ಜಿಲ್ಲೆ

ಹುಣಸೂರಿನಲ್ಲಿ ಯುವರತ್ನನ ಸ್ಮರಣೆ

ಹುಣಸೂರು: ಯುವರತ್ನ ಪುನೀತ್ ರಾಜ್‌ಕುಮಾರ್ ಮೊದಲ ಪುಣ್ಯಸ್ಮರಣೆ ಅಂಗವಾಗಿ ಶಾಸಕ ಎಚ್.ಪಿ.ಮಂಜುನಾಥ್ ಸ್ನೇಹಜೀವಿ ಬಳಗದ ಸಾರಥ್ಯದಲ್ಲಿ ಶನಿವಾರ 120ಕ್ಕೂ ಹೆಚ್ಚು ಆಟೋಗಳಲ್ಲಿ ಪುನೀತ್ ಭಾವಚಿತ್ರದ ಮೆರವಣಿಗೆ, ಚುಟುಕು ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ವಿಶೇಷ ಕಾರ್ಯಕ್ರೃಮಗಳನ್ನು ಆಯೋಜಿಸಲಾಗಿತ್ತು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಯುವರತ್ನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿ ಸ್ಥಳದ ಪ್ರತಿರೂಪವನ್ನು ನಿರ್ಮಿಸಿ, ಪುಷ್ಪನಮನ ಸಲ್ಲಿಸಲಾಯಿತು.

ಹುಣಸೂರಿನಲ್ಲಿ ಮೊದಲ ಬಾರಿಗೆ 30 ಯಾರ್ಡ್ ಮೈದಾನದಲ್ಲಿ 4 ಓವರ್‌ಗಳ ಚುಟುಕು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ತಾಲೂಕಿನ ವಿವಿಧ ಕಾಲೇಜುಗಳಿಂದ 26 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿಶೇಷವೆಂದರೆ ಪ್ರತಿ ತಂಡದಲ್ಲಿ 7 ಮಂದಿ ಮಾತ್ರ ಆಟಗಾರರಿದ್ದು, ಈ ಪೈಕಿ ಇಬ್ಬರು ಮಹಿಳಾ ಆಟಗಾರರನ್ನು ಕಡ್ಡಾಯಗೊಳಿಸಲಾಗಿತ್ತು. ಪುನೀತ್ ರಾಜ್‌ಕುಮಾರ್ ಭಾವಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ನಗದು ಬಹುಮಾನ ಘೋಷಿಸಲಾಗಿತ್ತು.

ಮುನೇಶ್ವರ ಕಾವಲ್ ಮೈದಾನದಲ್ಲಿ ಸಂಜೆ ಸರಿಗಮಪ ತಂಡದ ಅಶ್ವಿನ್ ಪ್ರಭು, ಶ್ವೇತಾ ಪ್ರಭು, ಸ್ನೇಹಾ ಶಾಸ್ತ್ರಿ, ವರ್ಣಾ ಚೌಹಾಣ್, ಜ್ಞಾನ, ಸುಪ್ರೀತ್ ಅವರಿಂದ ಪುನೀತ್ ಚಿತ್ರದ ಹಾಡುಗಳ ಗಾಯನ ಆಯೋಜಿಸಲಾಗಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್ ಅರುಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಾಲೂಕಿನ ವಿವಿಧ ನೃತ್ಯ ತಂಡದಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ರಂಗನಾಥ ಬಡಾವಣೆಯಿಂದ 120ಕ್ಕೂ ಹೆಚ್ಚು ಆಟೋಗಳಲ್ಲಿ ಅಪ್ಪುವಿನ ಭಾವಚಿತ್ರ ಮೆರವಣಿಗೆಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು. ಬದುಕಿದ್ದಾಗಲೂ ಯುವ ಸಮುದಾಯದ ರಾಯಭಾರಿಯಾಗಿದ್ದ ಅಪ್ಪು ಮರಣಾನಂತರವೂ ಯುವಕರ ರಾಯಭಾರಿಯಾಗಿಯೇ ಉಳಿದಿದ್ದಾರೆ. ಅವರ ಅಭಿಮಾನಿಗಳ ಅಭಿಮಾನದ ಉತ್ಸಾಹ ಮತ್ತು ಅಪ್ಪುವನ್ನು ಕಳೆದುಕೊಂಡ ದುಃಖ ಎರಡನ್ನೂ ಕಾಣಬಹುದಾಗಿದೆ. ಕನ್ನಡ ನಾಡಿಗೆ ನಿಜವಾದ ಯುವರತ್ನ ಅವರಾಗಿದ್ದರು. ಹುಣಸೂರಿನಲ್ಲಿ ಅಪ್ಪು ಪುಣ್ಯಸ್ಮರಣೆ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರಿಗೆ ತಾಲೂಕಿನ ಜನತೆಯ ಪರವಾಗಿ ಶ್ರದ್ಧಾಂಜಲಿ ಸಮರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಆರ್.ಆನಂದ್, ಉದ್ಯಮಿ ಎಚ್.ಪಿ.ಅಮರನಾಥ್, ಯುವರತ್ನ ಸಂಸ್ಥೆಯ ಕಾರ್ಯದರ್ಶಿ ಸಚ್ಚಿನ್ ಪ್ರಕಾಶ್, ಕಲ್ಕುಣಿಕೆ ರಾಘು, ನಾಗರಾಜ್, ಗಣೇಶ್ ಇತರರು ಇದ್ದರು.