ಜಿಲ್ಲೆ

ಹುಣಸೂರಲ್ಲಿ ಚುನಾವಣೆ ಬಿಸಿ

ಮಂಜುನಾಥ ಟಿ.ಭೋವಿ ಮೈಸೂರು

ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಇನ್ನೂ ಎಲೆಕ್ಷನ್ ಕಾವು ಪಡೆದುಕೊಂಡಿಲ್ಲ. ಆದರಿಲ್ಲಿ ಈಗಾಗಲೇ ಬಿಸಿ ಕಾಣಿಸಿಕೊಳ್ಳುತ್ತಿದೆ. ಪ್ರತಿದಿನ ಒಂದಲ್ಲ ಒಂದು ಚಟುವಟಿಕೆ ಬಿರುಸಿನಿಂದ ಸಾಗಿವೆ.

ಕುಸ್ತಿ, ಬಾಕ್ಸಿಂಗ್ ಇನ್ನಿತರ ಕ್ರೀಡಾಕೂಟಗಳು, ಭಿನ್ನ -ವಿಭಿನ್ನ ಚಟುವಟಿಕೆ ಗರಿಗೆದರಿವೆ. ಇದೆಲ್ಲವೂ ಜೆಡಿಎಸ್ ಮತ್ತು ಕಾಂಗ್ರೆಸ್ ಕೃಪಾಪೋಷಿತ ಚಟುವಟಿಕೆ. ಉಭಯ ಪಕ್ಷಗಳ ಅಭ್ಯರ್ಥಿ ಪಕ್ಕಾ ಆಗಿದೆ. ಆದ್ದರಿಂದ ಟಿಕೆಟ್ ಖಚಿತಗೊಂಡಿರುವ ಈ ಅಭ್ಯರ್ಥಿಗಳು ಊರೂರು ಗಿರಕಿ ಹೊಡೆಯುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಏಕೈಕ ಆಕಾಂಕ್ಷಿ:
ಶಾಸಕ ಎಚ್.ಪಿ.ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಮೂರು ಬಾರಿ ಶಾಸಕರಾಗಿರುವ ಅವರು ಮರು ಆಯ್ಕೆ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದು ಅಗ್ನಿಪರೀಕ್ಷೆಗೆ ಸಜ್ಜಾಗಿರುವ ಅವರಿಗೆ ಸ್ವಪಕ್ಷದಲ್ಲಿ ಸದ್ಯಕ್ಕೆ ಪ್ರತಿಸ್ಪರ್ಧಿಗಳು ಇಲ್ಲ. ಆಕಾಂಕ್ಷಿಗಳು ಗೋಚರವಾಗುತ್ತಿಲ್ಲ.

ಜೆಡಿಎಸ್‌ನಲ್ಲಿ ಟಿಕೆಟ್ ಘೋಷಣೆ:
ಜೆಡಿಎಸ್‌ನಲ್ಲೂ ಟಿಕೆಟ್ ಬಹುತೇಕ ಖಾತ್ರಿಯಾಗಿದೆ. ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ, ಮೈಸೂರು- ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಜೆಡಿಎಸ್ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿದೆ. ಅನೌಪಚಾರಿಕವಾಗಿ ಪ್ರಕಟಿಸಿರುವ ಪಕ್ಷದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹರೀಶ್‌ಗೌಡ ಹೆಸರು ಇದೆ. ಹೀಗಾಗಿ, ಕಳೆದ ಎರಡು ತಿಂಗಳಿಂದ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಇವರು, ಊರೂರು ಸುತ್ತುತ್ತಿದ್ದಾರೆ. ಯುವಕರನ್ನು ಸೆಳೆಯಲು ವಿವಿಧ ರೀತಿಯ ತಂತ್ರ ರೂಪಿಸುತ್ತಿದ್ದಾರೆ.
ಆದರೆ, ಕಳೆದ ಉಪಚುನಾವಣೆಯಲ್ಲಿ 32 ಸಾವಿರ ಮತ ಪಡೆದಿದ್ದ ದೇವರಹಳ್ಳಿ ಸೋಮಶೇಖರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಕೊಡುವುದಾಗಿ ಪಕ್ಷದ ವರಿಷ್ಠರು ನೀಡಿದ ಭರವಸೆ ಮೇರೆಗೆ ಇವರು ಚುನಾವಣಾ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಏಕಾಏಕಿ ಹರೀಶ್‌ಗೌಡ ರಂಗ ಪ್ರವೇಶವಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಸೋಮಶೇಖರ್ ಬಂಡಾಯದ ಬಾವುಟ ಹಾರಿಸಲು ಸಿದ್ಧರಾಗಿದ್ದಾರೆ. ಇವರ ಮುಂದಿನ ರಾಜಕೀಯ ನಡೆ ಏನು ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳು ಜಾಸ್ತಿ:
ಸ್ಥಳೀಯ ನಾಯಕತ್ವ ಕೊರತೆ ಇರುವ ಬಿಜೆಪಿಯಲ್ಲಿ ಆಕಾಂಕ್ಷಿಗಳಿಗೇನೂ ಅಭಾವ ಇಲ್ಲ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದ, ನಗರಸಭೆ ಸದಸ್ಯ ಗಣೇಶ್‌ಕುಮಾರ್ ಸ್ವಾಮಿ, ಹಿರಿಯ ಮುಖಂಡ ಬಿ.ಎನ್.ನಾಗರಾಜಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ನಾಗಣ್ಣಗೌಡ ಟಿಕೆಟ್ ಬಯಸಿದ್ದಾರೆ. ಆದರೆ, ವರ್ಚಸ್ಸು, ಪ್ರಬಲ ನಾಯಕತ್ವ, ವೈಯಕ್ತಿಕ ಸಂಘಟನಾ ಬಲವಿಲ್ಲದ ಕಾರಣಕ್ಕೆ ಇವರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬ ಮಾತು ಆ ಪಕ್ಷದಲ್ಲೇ ಕೇಳಿಬರುತ್ತಿದೆ. ಹೀಗಾಗಿ, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಈ ನಡುವೆ, ‘ಹುಣಸೂರಿಗೆ ಸಮರ್ಥ ಅಭ್ಯರ್ಥಿ ನೀಡಲಾಗುವುದು’ ಎಂದು ಮುಖಂಡರು ಇತ್ತೀಚೆಗೆ ಹೇಳಿದ್ದಾರೆ. ಹೀಗಾಗಿ, ಹೊರಗಿನವರು ಬರಬಹುದು ಎಂಬ ಮಾತು ಕೇಳಿಬರುತ್ತಿದೆ. ಆ ಅಭ್ಯರ್ಥಿ ಯಾರು ಎಂಬ ಕುತೂಹಲ ರಾಜಕೀಯ ವಲಯದಲ್ಲಿ, ಬಿಜೆಪಿ ಪಾಳಯದಲ್ಲಿ ಮೂಡಿದೆ.

ಯೋಗೇಶ್ವರ್ ಬರುತ್ತಾರೆಯೇ?
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈ ಸಲ ಏನಾದರೂ ಬರುತ್ತಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಯೋಗೇಶ್ವರ್ ಪ್ರಯತ್ನಿಸಿದ್ದರು. ತಯಾರಿ ಕೂಡ ಮಾಡಿಕೊಂಡಿದ್ದರು. ಆದರೆ, ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದಿದ್ದ ಎಚ್.ವಿಶ್ವನಾಥ್ ಪಟ್ಟು ಹಿಡಿದು ಟಿಕೆಟ್ ಪಡೆದುಕೊಂಡಿದ್ದರಿಂದ ಯೋಗೇಶ್ವರ್ ಅವರಿಗೆ ಅವಕಾಶ ಕೈತಪ್ಪಿತ್ತು. ಪಕ್ಷದಲ್ಲಿ ಪ್ರಬಲ ಆಕಾಂಕ್ಷಿಗಳಿಲ್ಲದೆ ಖಾಲಿ ಹೊಡೆಯುತ್ತಿರುವ ಇಲ್ಲಿಯ ನಿರ್ವಾತವನ್ನು ಉಪಯೋಗ ಮಾಡಿಕೊಳ್ಳಲು ಯೋಗೇಶ್ವರ್ ಬರುತ್ತಾರೆಯೇ ಎಂಬುದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಸುಳಿವು ಸಹ ದೊರೆತಿಲ್ಲ.

ಹಿಂದೆ ಸರಿದ ‘ಹಳ್ಳಿಹಕ್ಕಿ’
ಕಳೆದ ಉಪಚುನಾವಣೆಯಲ್ಲಿ ಸೋತಿರುವ ಎಚ್.ವಿಶ್ವನಾಥ್ ಮತ್ತೊಂದು ಚುನಾವಣೆಗೆ ಇನ್ನೂ ಅಣಿಯಾಗಿಲ್ಲ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರೂ ಆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ, ಆ ಪಕ್ಷದ ನೀತಿ-ನಿಲುವು, ಬಿಜೆಪಿ ಸರ್ಕಾರದ ನಿರ್ಧಾರ- ನಡೆ ಕುರಿತು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹೀಗಾಗಿ, ಅವರಿಗೆ ಅಪ್ಪಿತಪ್ಪಿಯೂ ಟಿಕೆಟ್ ಕೊಡಲು ಬಿಜೆಪಿ ಮುಂದಾಗುವುದಿಲ್ಲ.

ಜೆಡಿಎಸ್‌ನಲ್ಲಿ ಬಂಡಾಯದ ಬೇಗುದಿ:
ಜೆಡಿಎಸ್‌ನಲ್ಲಿ ಒಳಬೇಗುದಿ ಕುದಿಯುತ್ತಿದೆ. 3 ವರ್ಷದಿಂದ ಪಕ್ಷದಿಂದ ದೂರ ಉಳಿದಿದ್ದ ಜಿ.ಟಿ.ದೇವೇಗೌಡ ಮತ್ತು ಹರೀಶ್‌ಗೌಡ ಅವರು ಬಿಜೆಪಿ, ಕಾಂಗ್ರೆಸ್‌ನೊಂದಿಗೆ ಸಖ್ಯ ಬೆಳೆಸಿಕೊಂಡು ರಾಜಕೀಯ ಲಾಭ ಪಡೆದುಕೊಂಡರು. ಅಲ್ಲಿ ಅಪ್ಪ- ಮಗನಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ಗೆ ವಾಪಸ್ ಆಗಿದ್ದಾರೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಜಿಟಿಡಿ ವಿರೋಧಿ ಬಣದ ಮುಖಂಡರು ಮೈಸೂರಿನಲ್ಲಿ ಸ್ವಾಭಿಮಾನ ಸಭೆ ನಡೆಸಿ ಅಪ್ಪ- ಮಗನನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದಾಗಿ ನಿರ್ಧರಿಸಿದ್ದಾರೆ. ಇದು ಜೆಡಿಎಸ್‌ಗೆ ಮುಳುವಾಗಬಹುದು.

4ನೇ ಗೆಲುವಿಗಾಗಿ ಮಂಜುನಾಥ್ ಓಟ:
2008, 2013ರಲ್ಲಿ ಸತತ ಎರಡು ಬಾರಿ ಎಚ್.ಪಿ. ಮಂಜುನಾಥ್ ಗೆಲುವು ಸಾಧಿಸಿದ್ದರು. 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್.ವಿಶ್ವನಾಥ್ ಗೆಲುವು ಕಂಡರು, ಮಂಜುನಾಥ್ ಸೋತರು. ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದಿಂದಾಗಿ 2019ರಲ್ಲಿ ಉಪಚುನಾವಣೆ ನಡೆಯಿತು. ಆಪರೇಷನ್ ಕಮಲದ ಮೂಲಕ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ಎಚ್.ವಿಶ್ವನಾಥ್ ಅವರನ್ನು 39 ಸಾವಿರ ಮತಗಳ ಅಂತರದಲ್ಲಿ ಪರಾಜಯಗೊಳಿಸುವ ಮೂಲಕ ಮಂಜುನಾಥ್ ಜಯ ದಾಖಲಿಸಿದ್ದರು. ಕೇವಲ 15 ತಿಂಗಳ ಬಳಿಕ 3ನೇ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಇದೀಗ 4ನೇ ಗೆಲುವಿಗಾಗಿ ಮಂಜುನಾಥ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಊರೂರು ಸುತ್ತುತ್ತಿದ್ದಾರೆ.
ಮತ್ತೊಂದೆಡೆ, ಹರೀಶ್‌ಗೌಡ ಮತದಾರರ ಭೇಟಿಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಇಬ್ಬರ ಅಬ್ಬರದ ನಡುವೆ ಬಿಜೆಪಿ ಮಂಕಾಗಿದೆ. ಸೂಕ್ತ ಅಭ್ಯರ್ಥಿ ಹಾಕದಿದ್ದರೆ ಜೆಡಿಎಸ್- ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.