ಜಿಲ್ಲೆ

ಹುಣಸೂರಲ್ಲಿ ಎಲ್‌ಐಸಿ ಪ್ರತಿನಿಧಿಗಳ ಪ್ರತಿಭಟನೆ

ಲೋಕೇಶ್ ಮನು. ಡಿ

ಹುಣಸೂರು: ಜೀವ ವಿಮಾ ನಿಗಮ(ಎಲ್‌ಐಸಿ) ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿಮಾ ಪ್ರತಿನಿಧಿಗಳ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ನಗರದ ಎಲ್‌ಐಸಿ ಕಚೇರಿ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಬೇಡಿಕೆಗಳ ಈಡೇರಿಕೆಗೆ ಘೋಷಣೆಗಳನ್ನು ಕೂಗಿದರು.


ಸಂಘಟನೆಯ ಅಧ್ಯಕ್ಷ ರಾಧಾಕೃಷ್ಣ ಮಾತನಾಡಿ, ದೇಶದ ಆರ್ಥಿಕ ಸದೃಢತೆಯಲ್ಲಿ ಎಲ್‌ಐಸಿ ಪ್ರಮುಖ ಪಾತ್ರ ವಹಿಸಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ದೇಶದಲ್ಲಿರುವ ಲಕ್ಷಾಂತರ ಪ್ರತಿನಿಧಿಗಳು ಹಗಲು-ರಾತ್ರಿ ಜನಸಾಮಾನ್ಯರ ಬಳಿ ತೆರಳಿ ಪಾಲಿಸಿಗಳನ್ನು ಮಾಡಿಸುವ ಮೂಲಕ ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ಇಂತಹ ಪ್ರತಿನಿಧಿಗಳನ್ನು ಎಲ್‌ಐಸಿ ಆಡಳಿತ ಮಂಡಳಿ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷೃ ಮಾಡಿದೆ. ಗುಂಪು ವಿಮೆ ಮತ್ತು ಕಮಿಷನ್ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಶಕಗಳಿಂದ ಹೋರಾಟಗಳ ನಡೆಸಿದ್ದರೂ ನಿರ್ಲಕ್ಷೃ ಮಾಡಲಾಗುತ್ತಿದೆ ಎಂದರು.

ಸಂಘಟನೆಯ ಸದಸ್ಯರಾದ ನಾಗರಾಜು, ವಿ.ಬಸವರಾಜು ಕಲ್ಕುಣಿಕೆ, ಆರ್.ಟಿ.ರವಿ, ಎ.ವೀರಭದ್ರ, ಸಿದ್ದಯ್ಯ, ಶಿವರುದ್ರು, ಎನ್.ದೇವಕೀರ್ತಿ ಇತರರು ಭಾಗವಹಿಸಿದ್ದರು.