ಹುಣಸೂರು ನಗರದ ತಾಲೂಕು ಕಚೇರಿ ಮುಂಭಾಗ ಶಿರಸ್ತೇದಾರ್ ಶಕೀಲಾ ಬಾನು ಅವರಿಗೆ ಆದಿವಾಸಿಗಳು ಮನವಿ ಸಲ್ಲಿಸಿದರು. ಡಾ.ಎಸ್.ಶ್ರೀಕಾಂತ್, ಪಿ.ಕೆ.ರಾಮು, ಜಯಪ್ಪ, ಹರಿಹರ ಆನಂದಸ್ವಾಮಿ, ದೇವೇಂದ್ರ ಇದ್ದರು. 
ಜಿಲ್ಲೆ

ಹುಣಸೂರಲ್ಲಿ ಆದಿವಾಸಿಗಳಿಂದ ಶೋಕ ದಿನ ಆಚರಣೆ

ಹುಣಸೂರು: ಹುಲಿ ಯೋಜನೆಗೆ 50ರ ಸಂಭ್ರಮಾಚರಣೆ ವೇಳೆ ಆದಿವಾಸಿಗಳ ಅಳಲನ್ನು ಪ್ರಧಾನ ಮಂತ್ರಿಗೆ ತಿಳಿಸಲು ಅವಕಾಶ ನೀಡದಿರುವುದಕ್ಕೆ ಆಕ್ರೋಶಗೊಂಡು ಶೋಕ ದಿನಾಚರಣೆ ಆಚರಿಸುವ ಮೂಲಕ ಆದಿವಾಸಿಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಭಾನುವಾರ ನಗರದ ಡೀಡ್ ಸಂಸ್ಥೆಯಲ್ಲಿ ಶೋಕ ದಿನಾಚರಣೆ ಆಚರಿಸಿದರು. ನಂತರ ಗಿರಿಜನರು ಮೆರವಣಿಗೆ ಮೂಲಕ ನಗರದ ತಾಲೂಕು ಕಚೇರಿ ಆವರಣಕ್ಕೆ ಆಗಮಿಸಿ ಮೌನಪ್ರತಿಭಟನೆ ನಡೆಸಿದರು.

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಹುಲಿ ಸಂರಕ್ಷಣೆ ಹೆಸರಿನಲ್ಲಿ ಆದಿವಾಸಿಗಳ ಹಕ್ಕುಗಳನ್ನು ಹರಣ ಮಾಡಿ ಅರಣ್ಯದಿಂದ ಪುರ್ನವಸತಿ ನೀಡದೆ ಹೊರಹಾಕಿದ ಅರಣ್ಯ ಇಲಾಖೆಗೆ ಏ.9 ಸಂಭ್ರಮದ ದಿನವಗಿದೆ. ಆದರೆ ಅರಣ್ಯ ನೆಲಸುಗಳನ್ನು ಕಳೆದುಕೊಂಡು ಪುರ್ನವಸತಿಯೂ ಇಲ್ಲದೆ ಕನಿಷ್ಠ ಬದುಕಿಗಾಗಿ ಕೂಲಿ ಮಾಡಿ ಜೀವಿಸಿ ಹಿರಿಯರನ್ನು ಕಳೆದುಕೊಂಡ ಆದಿವಾಸಿಗಳಿಗೆ ಶೋಕದ ದಿನವಾಗಿದೆ ಎಂದರು.

ಕಾಡಿನಿಂದ ಹೊರಗಟ್ಟಿ 50 ವರ್ಷ ಸಂದಿವೆ. ಪುರ್ನವಸತಿ ನೀಡದೆ ಹೊರಗಟ್ಟುವುದು ತಪ್ಪು. ಇದು ದೌರ್ಜನ್ಯ ಎಂದು ಗೊತ್ತಿದ್ದರೂ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೆಸರಿನಲ್ಲಿ ಆದಿವಾಸಿಗಳಿಗೆ ದ್ರೋಹ ಬಗೆದಿದೆ. ಅರಣ್ಯ ಹಕ್ಕಿನ ಮಾನ್ಯತಾ ಕಾಯ್ದೆ 2006 ಅನ್ನು ನ್ಯಾಯಬದ್ಧವಾಗಿ ಅನುಷ್ಠಾನಗೊಳಿಸದೆ ಅರಣ್ಯ ಇಲಾಖೆಯ ಕುಯುಕ್ತಿಯಿಂದ ಮತ್ತೆ ಆದಿವಾಸಿಗಳಿಗೆ ಅನ್ಯಾಯ ಮಾಡಿದೆ. ಆದಿವಾಸಿಗಳ ಸಮಸ್ಯೆ ಕುರಿತು ಮೈಸೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿ ಮನವಿ ಪತ್ರ ಸಲ್ಲಿಸಲು ಕೂಡ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಹಾಗಾಗಿ ಏ.9ರಂದು ನಮಗಾದ ಅನ್ಯಾಯದ ವಿರುದ್ಧ ದನಿಯೆತ್ತಲು ಶಾಂತಿಯುತವಾಗಿ ನಮ್ಮ ಹಿರಿಯರ ಸ್ಮರಣಾರ್ಥ ಶೋಕ ದಿನಾಚರಣೆ ಆಚರಿಸಿದ್ದೇವೆ ಎಂದರು.

ಡೀಡ್‌ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಪ್ರಧಾನಿಗೆ ಆದಿವಾಸಿಗಳ 50 ವರ್ಷದ ನೋವು ಅರ್ಥವಾಗಬೇಕಿದೆ. ಇದನ್ನು ತುರ್ತಾಗಿ ಮಾಡಲಿ ಎಂದು ಆಗ್ರಹಿಸಿದರು.

ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಜಯಪ್ಪ, ದಲಿತ ಚಳುವಳಿ ನವನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ ಮಾತನಾಡಿದರು. ಆದಿವಾಸಿ ಮುಖಂಡರಾದ ಹರ್ಷ, ಶಿವಣ್ಣ, ಪ್ರಕಾಶ್, ವಿಠಲ್, ಅರಪೇಟಯ್ಯ, ಜೋತಿ, ಚಂದ್ರ, ಕಲ್ಲುರಯ್ಯ, ಕೀರ್ತಿ, ಚಿತ್ರ, ನಿತ್ಯ, ಮೌನ, ದರ್ಶನ್, ಕಬ್ಬಾಳಯ್ಯ, ಈರಯ್ಯ, ರಕ್ಷಿತ ಮುಂತಾದವರು ಪಾಲ್ಗೊಂಡಿದ್ದರು. ಶಿರಸ್ತೇದಾರ್ ಶಕೀಲಾ ಬಾನು ಅವರಿಗೆ ಮನವಿ ಸಲ್ಲಿಸಲಾಯಿತು.

ಹಕ್ಕೊತ್ತಾಯಗಳಿವು:
1. ಅರಣ್ಯ ಹಕ್ಕಿನ ಕಾಯ್ದೆಯನ್ವಯ ಅರಣ್ಯ ನೆಲಸುಗಳ ಮೇಲಿನ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು ಹಾಗೂ ವೈಯಕ್ತಿಕ ಅರಣ್ಯ ಹಕ್ಕುಗಳನ್ನು ಆದಿವಾಸಿಗಳಿಗೆ ಕೂಡಲೇ ನೀಡಬೇಕು.

2. ಹೈಕೋರ್ಟ್ ಆದೇಶ ಪಾಲಿಸಿ ಪ್ರೊ.ಮುಜಾಫರ್ ಅಸ್ಸಾದಿ ವರದಿಯನ್ವಯ ನಾಗರಹೊಳೆ ಕಾಡಿನಿಂದ ಹೊರಹಾಕಲಾಗಿರುವ 3418 ಕುಟುಂಬಗಳಿಗೆ ಕೂಡಲೇ ಪುರ್ನವಸತಿ ನೀಡಬೇಕು.

3. 9 ಜಿಲ್ಲೆಗಳ 38 ತಾಲ್ಲೂಕುಗಳಲ್ಲಿರುವ 1500 ಆದಿವಾಸಿ ಹಾಡಿ, ಪೋಡು, ದೊಡ್ಡಿ ಹಾಗೂ ಅವರ ಕಾಡಿನ ನೆಲಸುಗಳನ್ನು ಅನುಸೂಚಿತ ಪ್ರದೇಶವೆಂದು ಘೋಷಿಸಬೇಕು.

4. ಅರಣ್ಯ ವಾಸದ ಹಿನ್ನೆಲೆಯುಳ್ಳ ಆದಿವಾಸಿಗಳಿಗೆ ಹಾಗೂ ಪಿವಿಟಿಜಿ(ಪ್ರಾಚೀನ ಬುಡಕಟ್ಟುಗಳು)ಬುಡಕಟ್ಟುಗಳೆಂದು ಗುರುತಿಸಿರುವ (ಜೇನುಕುರುಬರು ಮತ್ತು ಕೊರಗರು) ಆದಿವಾಸಿಗಳಿಗೆ ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡಬೇಕು.

5.ಪ್ರಾಚೀನ ಬುಡಕಟ್ಟುಗಳ (ಪಿವಿಟಿಜಿ) ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಕಾಡು ಹಾಗೂ ವನ್ಯಜೀವಿ ನಿರ್ವಹಣೆಯಲ್ಲಿ ಪಾಲುದಾರರನ್ನಾಗಿಸಿ ಆದಿವಾಸಿಗಳು ಹೆಮ್ಮೆಯಿಂದ ಬಾಳುವಂತೆ ಅವಕಾಶ ನೀಡಬೇಕು.