ಧಾರವಾಡ: ಹುಣಸಿಕುಮರಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹುಣಸಿಕುಮರಿ ಜನ ಹೋರಾಟ ಸಮಿತಿ ಮತ್ತು ರೈತ ಕೃಷಿ ಕಾರ್ವಿುಕರ ಸಂಘಟನೆ ವತಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕೆಸಿಡಿ ವೃತ್ತದಿಂದ ಜಿಪಂ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಇದು ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಪ್ರದರ್ಶಿಸುತ್ತದೆ ಎಂದು ದೂರಿದರು.
ಸುಮಾರು 70 ವರ್ಷಗಳಿಂದ ಈ ಗ್ರಾಮಕ್ಕೆ ರಸ್ತೆ ಸಹ ನಿರ್ವಿುಸಿಲ್ಲ. ಗೌಳಿ ಜನಾಂಗದವರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ 500-600 ಜನ ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ಬಸ್, ಚರಂಡಿ, ಶೌಚಗೃಹ, ಆರೋಗ್ಯ ಕೇಂದ್ರ ಸೇರಿ ಯಾವುದೇ ಸೌಲಭ್ಯವಿಲ್ಲ. ಪ್ರತಿ ಕೆಲಸಕ್ಕೂ ನಾಲ್ಕೈದು ಕಿ.ಮೀ. ತೆರಳುವ ಅನಿವಾರ್ಯತೆ ಇದೆ. ಇದರಿಂದ ಗ್ರಾಮದ ಜನರು ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಅವರಿಗೆ ಮನವಿಪತ್ರ ಸಲ್ಲಿಸಿದರು.
ಆರ್ಕೆಎಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಹೋರಾಟ ಸಮಿತಿ ಸದಸ್ಯ ಸಿದ್ದು ಎಲ್, ಗಂಗಾ ಕೋಕರೆ, ಗ್ರಾಪಂ ಸದಸ್ಯ ಸುನೀಲ, ಶರಣು ಗೋನವಾರ, ಬಾಪೂ ತರವಾಟ್,ಲಕ್ಷ್ಮಣ ಶೀಲವಾಕೆ, ಜಿಮೂ ತೋರವಾಟ, ಪಾಂಡು ತೋರವಾಟ, ವಿಠ್ಠಲ ಲಾಂಬರೋ, ಇತರರು ಇದ್ದರು.</