ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಆಹ್ವಾನಿಸಿದ್ದ ನೂತನ ನಿವೇಶನಕ್ಕೆ 57,765 ಅರ್ಜಿ ಸಲ್ಲಿಕೆಯಾಗಿದ್ದು, 65.39 ಕೋಟಿ ರೂ. ಸಂಗ್ರಹವಾಗಿದೆ.
ಎಸ್.ಎಂ. ಕೃಷ್ಣ ಬಡಾವಣೆ ನಿರ್ಮಾಣದ ಬಳಿಕ ಮತ್ತೊಂದು ಬೃಹತ್ ಯೋಜನೆಗೆ ಹುಡಾ ಕೈ ಹಾಕಿದ್ದು ಮುಂದಿನ ಮೂರು ವರ್ಷಗಳಲ್ಲಿ ನೂತನ ಬಡಾವಣೆ ನಿರ್ಮಾಣವಾಗಲಿದೆ.
1200 ಎಕರೆ ಜಾಗ: ನೂತನ ಬಡಾವಣೆಗೆ 1,200 ಎಕರೆ ಜಮೀನಿನ ಅವಶ್ಯಕತೆಯಿದ್ದು ನಗರದ ಹೊರವಲಯದ ಬೂವನಹಳ್ಳಿ, ಕೆಂಚಟ್ಟಹಳ್ಳಿ, ಸಮುದ್ರಹಳ್ಳಿ, ಗೇಕರಹಳ್ಳಿಯ ಜಮೀನು ಗುರುತಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ಮೊದಲ ಹಂತದ ಸಮೀಕ್ಷೆ ನಡೆದಿದ್ದು ಶೇ.85 ರಷ್ಟು ರೈತರು 50:50ರ ಅನುಪಾತದಲ್ಲಿ ಭೂಮಿ ನೀಡಲು ಒಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
1,200 ಎಕರೆ ಭೂಮಿಯಲ್ಲಿ ವಿವಿಧ ಅಳತೆಯ 14 ಸಾವಿರ ನಿವೇಶನ ನಿರ್ಮಿಸಲು ಹುಡಾ ನಿರ್ಧರಿಸಿದೆ. ಆದರೆ ಇನ್ನೂ ಭೂಮಿ ಸ್ವಾಧೀನಕ್ಕೆ ಪಡೆಯದೆ ಅರ್ಜಿ ಸ್ವೀಕರಿಸಿರುವುದು ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
70 ಸಾವಿರ ಅರ್ಜಿ ವಿತರಣೆ: ನೂತನ ನಿವೇಶನ ಬಯಸುವವರಿಗೆ ಬ್ಯಾಂಕ್ ಮೂಲಕವೇ ಅರ್ಜಿ ಸಲ್ಲಿಸಲು ಹುಡಾ ಅವಕಾಶ ಕಲ್ಪಿಸಿತ್ತು. ಬ್ಯಾಂಕ್‌ಗಳಲ್ಲಿ ದೊರೆತ ಅರ್ಜಿ ನಮೂನೆ ಭರ್ತಿ ಮಾಡಿ, ಅದರ ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸಬೇಕಿತ್ತು. ನಂತರ ಶುಲ್ಕದ ರಸೀದಿಯನ್ನು ಹುಡಾಗೆ ಸಲ್ಲಿಸುವಂತೆ ಜೂನ್ 30ರವರೆಗೆ ಸಮಯಾವಕಾಶ ನೀಡಲಾಗಿತ್ತು. ಹುಡಾ ವಿತರಿಸಿದ್ದ 70 ಸಾವಿರ ಅರ್ಜಿಗಳ ಪೈಕಿ 57,765 ಜನರು ನೋಂದಣಿ ಶುಲ್ಕ ಪಾವತಿಸಿ ನಿಯಮಬದ್ಧವಾಗಿ ಸಲ್ಲಿಸಿದ್ದಾರೆ.
ನಾಲ್ಕು ವರ್ಷದ ಕನಸು: ಎಸ್.ಎಂ.ಕೃಷ್ಣ ಬಡಾವಣೆ ಬಳಿಕ ಮತ್ತೊಂದು ನೂತನ ಬಡಾವಣೆ ನಿರ್ಮಾಣವಾಗಬೇಕೆಂಬುದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಕಂಡಿದ್ದ ನಾಲ್ಕು ವರ್ಷಗಳ ಕನಸಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹುಡಾ ಅಧ್ಯಕ್ಷರಾಗಿದ್ದ ಕೃಷ್ಣಕುಮಾರ್ ಈ ಕುರಿತು ನಿರ್ಧಾರ ಪ್ರಕಟಿಸಿದ್ದರು. ಆ ಸಂದರ್ಭದಲ್ಲಿಯೇ ರೈತರೊಂದಿಗೆ ಎರಡು ಸಭೆ ನಡೆಸಿ ತೀರ್ಮಾನಕ್ಕೆ ಬರಲಾಯಿತು. ನಂತರ ಸರ್ಕಾರ ಬದಲಾಗಿ ಯೋಜನೆ ತಟಸ್ಥ ರೂಪ ಪಡೆದಿತ್ತು.
ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಅಧ್ಯಕ್ಷರಾಗಿದ್ದ ಕೆ.ಎಂ.ರಾಜೇಗೌಡರು ನೂತನ ಬಡಾವಣೆಗೆ ಒಲವು ತೋರಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು ಅರ್ಜಿ ಪಡೆಯುವ ಕಾರ್ಯ ಪೂರ್ಣಗೊಂಡಿದೆ.
ಬಡಾವಣೆಗೆ ಭೂಮಿ ನೀಡಲು ಶೇ. 85 ರಷ್ಟು ರೈತರು ಉತ್ಸುಕರಾಗಿದ್ದಾರೆಂದು ಹುಡಾ ಆಯುಕ್ತ ರಮೇಶ್, ಶಾಸಕ ಪ್ರೀತಂ ಜೆ. ಗೌಡ ಹೇಳಿದ್ದಾರೆಯಾದರೂ ಉಳಿದ ಶೇ.15 ರಷ್ಟು ಜನರಿಂದ ಸಮಸ್ಯೆಯಾಗುವ ಆತಂಕವಿದೆ. 50:50 ಅನುಪಾತದಲ್ಲಿ ನಿವೇಶನ ನೀಡುವುದು ಮಾತ್ರವಲ್ಲದೆ ಹೆಚ್ಚಿನ ಪರಿಹಾರ ನೀಡಬೇಕೆಂದು ವ್ಯಾಪ್ತಿಯ ರೈತರು ಪಟ್ಟು ಹಿಡಿದಿದ್ದಾರೆ.
ಜಮೀನು ಅಗ್ರಿಮೆಂಟ್, ಸರ್ವೇ, ಸರ್ಕಾರದಿಂದ ಅನುಮತಿ ದೊರೆತ ಬಳಿಕ ಮತ್ತೊಂದು ಬಾರಿ ಅರ್ಜಿ ಕರೆಯಲಾಗುತ್ತದೆ. ಆ ಬಳಿಕ ಮೀಸಲಾತಿ ಅನ್ವಯ ನಿವೇಶನ ಗುರುತಿಸಿ ಅರ್ಹರನ್ನು ಗುರುತಿಸಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷ ಬೇಕಾಗುತ್ತದೆ.