ಜಿಲ್ಲೆ

ಹುಟ್ಟೂರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ಶತಮಾನೋತ್ಸವ

ಹಾಸನ/ಗೊರೂರು: ಗಾಂಧಿವಾದಿ, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಅವರ ಹುಟ್ಟೂರು ಗೊರೂರಿನಲ್ಲಿ ಅರಕಲಗೂಡು ತಾಲೂಕು ಸಾಹಿತ್ಯ ಪರಿಷತ್ತಿನ ವತಿಯಿಂದ ಅದ್ಧೂರಿಯಾಗಿ ಭಾನುವಾರ ಆಚರಿಸಲಾಯಿತು.
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡರು ಮೆರವಣಿಗೆ ಜಾಥಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನೆಯ ಮುಂಭಾಗ ಚಾಲನೆ ನೀಡಿದರು. ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂಜಿಆರ್ ಅರಸು ಅವರು ಧ್ವಜಾರೋಹಣ ನೆರವೇರಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಾ.ನಂ. ಲೋಕೇಶ್ ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರದೊಂದಿಗೆ ಗೊರೂರಿನ ಪ್ರಮುಖ ಬೀದಿಗಳಲ್ಲಿ ಜರುಗಿದ ಜಾಥದಲ್ಲಿ ವೀರಗಾಸೆ ಸೇರಿದಂತೆ ಹಲವು ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.
ಸಭಾ ಕಾರ್ಯಕ್ರಮದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮಗಳು ವಸಂತಿ ಮೂರ್ತಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದ ನಮ್ಮ ತಂದೆಯವರು ವಿದ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅವರು ಅನಭವಿಸಿದ ಕಷ್ಟಗಳು ಸೇರಿ ಬದುಕಿನ ಹಲವು ಘಟನೆಗಳ ಬಗ್ಗೆ ವಿವರಿಸಿದರು. ತಂದೆಯವರ ಜನ್ಮದಿನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ವಗ್ರಾಮದಲ್ಲಿ ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಭಾವುಕರಾಗಿ ಮಾತನಾಡಿದರು.
ಅರಕಲಗೂಡು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುಂದರೇಶ್ ಡಿ. ಉಡುವೇರೆ ಮಾತನಾಡಿ, ಪುಟ್ಟ ಹಳ್ಳಿ ಗೊರೂರನ್ನು ವಿಶ್ವಮಾನ್ಯ ಮಾಡಿರುವ ಗೊರೂರರ ಸಾಧನೆ ಮಹತ್ವದ್ದು. ಹಾಗಾಗಿ ಮುಂದಿನ ವರ್ಷ 120ನೇ ಜನ್ಮದಿನಕ್ಕೆ ಗ್ರಾಮದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಕೆಲಸ ಆಗಬೇಕಿದೆ. ಈ ಕಾರ್ಯಕ್ಕೆ ಶಾಸಕರು, ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.
ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಗಾಂಧೀಜಿಯವರ ಅನುಯಾಯಿಯಾಗಿದ್ದ ಗೊರೂರರು ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಹೆಸರು ಚಿರಸ್ಥಾಯಿಯಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಮೆ ಸ್ಥಾಪನೆ ನನ್ನ ಕರ್ತವ್ಯ ಎಂದು ಭಾವಿಸಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಶಸ್ತಿ ಪ್ರಧಾನ
ಎನ್.ಎಲ್. ಚನ್ನೇಗೌಡರಿಗೆ ಗೊರೂರು ಸಂಪತ್ ಅಯ್ಯಂಗಾರ್ ಪ್ರಶಸ್ತಿ, ಗೊರೂರು ಪಂಕಜ ಅವರಿಗೆ ಡಾ. ಕಿ.ರಂ.ನಾಗರಾಜು ಪ್ರಶಸ್ತಿ, ಸುಂದರೇಶ್ ಡಿ. ಉಡುವೇರೆ ಅವರಿಗೆ ಸಾರ್ವಭೌಮ ಡಾ.ಅ.ನ.ಕೃ ಪ್ರಶಸ್ತಿ, ಬರಾಳು ಶಿವರಾಮು ಅವರಿಗೆ ಎಸ್.ವಿ. ರಂಗಣ್ಣ ಪ್ರಶಸ್ತಿ, ಗೊರೂರು ಅನಂತರಾಜು ಅವರಿಗೆ ಎಸ್.ಕೆ.ಖರೀಮ್ ಖಾನ್ ಪ್ರಶಸ್ತಿ, ಸೌಮ್ಯಾಶ್ರೀ ಮತ್ತು ಗೌರಿಶಂಕರ್ ಅವರಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿಯನ್ನು ಶಾಸಕರಾದ ಸಿಮೆಂಟ್ ಮಂಜು ಅವರು ಪ್ರದಾನ ಮಾಡಿದರು.

ಸಾಹಿತಿ ಸೌಮ್ಯಾಶ್ರೀ ಅವರು ‘ನಾ ಕಂಡಂತೆ ಗೊರೂರು’ ಕುರಿತು ಗೊರೂರರ ಬದುಕು ಬರಹಕ್ಕೆ ಸಂಬಂಧಿಸಿದಂತೆ ವಿಷಯ ಮಂಡಿಸಿದರು. ನಂತರ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಕಮಲಾ ನರಸಿಂಹ ವಹಿಸಿದ್ದರು. 50ಕ್ಕೂ ಹೆಚ್ಚು ಕವಿಗಳು ಕವಿತೆಗಳನ್ನು ವಾಚಿಸಿದರು. ಸರ್ಕಾರಿ ಪ್ರೌಢಶಾಲೆ ಎಚ್‌ಆರ್‌ಪಿ ಶಾಲೆ, ವಿವೇಕಾನಂದ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಗೊರೂರರ ಕುರಿತ ನೃತ್ಯ, ನಾಟಕ, ಗಾಯನ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಲೋಹಿತ್, ಚುಟುಕು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ದ್ರಾಕ್ಷಾಯಿಣಿ ಮುರುಗನ್, ಮಳಲಿ ಹರೀಶ್ ಕುಮಾರ್, ಪ್ರೇಮಾ ಮಂಜುನಾಥ್, ಡಾ. ಶ್ರೀನಿವಾಸ್, ರತ್ನಾ ಹಾಲಪ್ಪ ಗೌಡ, ಭೋಜರಾಜು, ಗೊರೂರು ಅನಂತರಾಜು, ಲೇಖಕ ರಾಜು, ರೇಣುಕಮ್ಮ ಗುರುಸ್ವಾಮಿ, ನಾಯಕರಹಳ್ಳಿ ಮಂಜೇಗೌಡ, ಬಂಗಾರಿ ಗೌಡ, ಮಾಜಿ ಸೈನಿಕರಾದ ಚಂದ್ರಶೇಖರ್, ಜಿಟಿ ಮಂಜುನಾಥ್, ವಿನಯ್ ಗುರುಸ್ವಾಮಿ, ವೇದಮೂರ್ತಿ, ಹೇಮರಾಜು, ನಿತಿನ್, ಪದ್ಮಾ ಮೂರ್ತಿ, ಪ್ರೇಮಾ ಮಂಜುನಾಥ್, ವಸಂತ ಹುಲ್ಲೇರ, ಗ್ರಾಮಸ್ಥರು ಪಾಲ್ಗೊಂಡಿದ್ದರು.