ಹಾಸನ: ಮನುಷ್ಯನ ಹುಟ್ಟು ಮತ್ತು ಸಾವು ಎರಡು ಕೂಡ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಈ ಮಧ್ಯೆ ಮಾಡುವ ಉತ್ತಮ ಕೆಲಸಗಳು ಹೆಸರಾಗಿ ಉಳಿಯುತ್ತದೆ ಎಂದು ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕೋ-ಆಪರೇಟಿವ್ ಸೊಸೈಟಿ ಇವರ ಸಹಯೋಗದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ 2025ರ ನೂತನ ಕ್ಯಾಲೆಂಡರ್ ಬಿಡುಗಡೆ ಹಾಗೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲರ ನೆಚ್ಚಿನ ನಾಯಕರಾದ ಎಸ್.ಎಂ. ಕೃಷ್ಣರವರು ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ನಮನ ಸಲ್ಲಿಸಲಾಗಿದೆ. ಪ್ರತಿಯೊಬ್ಬ ಮನುಷ್ಯನು ತಮ್ಮ ಜೀವಿತ ಅವಧಿಯಲ್ಲಿ ಏನಾದರೂ ಗುರುತರವನ್ನು ಉಳಿಸಿಕೊಳ್ಳಬೇಕು. ಮನುಷ್ಯ ಹುಟ್ಟುವಾಗ ಮಾತು ಬರಲ್ಲ. ಯಾವ ಹೆಸರು ಇರುವುದಿಲ್ಲ. ಸಾಯುವಾಗ ಹೆಸರು ಮಾತ್ರ ಇರುತ್ತದೆ. ಹುಟ್ಟು-ಸಾವು ಮಧ್ಯೆ ಮಾಡುವ ಕೆಲಸ ಹೆಸರಾಗಿ ಉಳಿಯುತ್ತದೆ. ಈ ವಿಚಾರದಲ್ಲಿ ಎಸ್.ಎಂ. ಕೃಷ್ಣ ಅವರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆ, ಸೇವೆಗಳು ಶಾಶ್ವತವಾಗಿ ಉಳಿದಿದೆ ಎಂದರು.
ನಮ್ಮ ಸಂಘ ಸತತವಾಗಿ ಹಲವಾರು ಕೆಲಸ ಮಾಡುವುದರ ಜತೆಗೆ ಸರ್ಕಾರಿ ನೌಕರರಿಗಾಗಿ ದುಡಿಯುತ್ತಾ ಬಂದಿದೆ. ಎಲ್ಲ ನಿರ್ದೇಶಕರ ಸಹಕಾರದಲ್ಲಿ ಉತ್ತಮ ಕೆಲಸ ಮಾಡಲಾಗುವುದು. ಸೇವೆ ಮಾಡುವುದಕ್ಕೆ ಎಲ್ಲ ರಂಗದಲ್ಲೂ ಅವಕಾಶ ಇದೆ. ಒಂದೂವರೆ ಕೋಟಿ ರೂ.ಸರ್ಕಾರಿ ನೌಕರರಿಗೆ ಸಾಲವನ್ನಾಗಿ ಕೊಡಲಾಗಿದೆ. ಎಲ್ಲ ನಿರ್ದೇಶಕರ ಒತ್ತಾಶಯದಂತೆ ಕಡಿಮೆ ಬಡ್ಡಿ ದರದಲ್ಲಿ ನಿವೇಶನ ಕೊಡಲಾಗುತ್ತಿದೆ. ಒಂದೇ ಜಾಗದಲ್ಲಿ 200 ನಿವೇಶನ ಕೊಡುವ ಗುರಿ ಇಟ್ಟುಕೊಂಡಿದ್ದೇವೆ. ಮುಂದೆ ಹಲವಾರು ಉದ್ದೇಶಗಳನ್ನು ಹೊಂದಿದ್ದೇವೆ. ಗೃಹ ನಿರ್ಮಾಣ ಹಾಗೂ ವಾಹನ ಖರೀದಿಗೆ ಸಾಲ ಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ.ಆರ್. ಧರ್ಮ, ಗೌರವ ಕಾರ್ಯದರ್ಶಿ ಸತೀಶ್, ಅಧ್ಯಕ್ಷ ಎಂ.ಎನ್. ಪರಮೇಶ್, ಗೌರವಾಧ್ಯಕ್ಷ ಬಿ.ಎನ್. ರಾಜಶೇಖರಪ್ಪ, ಮಧು, ರಾಜು ಇತರರು ಉಪಸ್ಥಿತರಿದ್ದರು.