ಜಿಲ್ಲೆ

ಹುಟ್ಟಿದೂರಿನವರಿಗೆ ನೆರವಾದ ಯುವಕ

ಸಂಜೀವಕುಮಾರ ಜುನ್ನಾ ಚಿಟಗುಪ್ಪ
ಉದ್ಯೋಗ, ಉದ್ಯಮ ಮಾಡುತ್ತ ಬೇರೆ ಊರಿಗೆ ಹೋದವರು ಹುಟ್ಟಿದ ಮರೆಯುವುದು ಸಹಜ. ಆದರೆ ಬೀದರ್ ತಾಲೂಕಿನ ಮೊಗದಳ ಗ್ರಾಮದ ಯುವಕರ ಸಂಜುಕುಮಾರ ಹೂಗಾರ ಹೈದರಾಬಾದ್ನಲ್ಲಿ ವ್ಯಾಪಾರ ಮಾಡುತ್ತಿದ್ದು, ತನ್ನ ಹುಟ್ಟೂರಿನ ಬಡವರ ನೆರವಿಗೆ ಧಾವಿಸಿದ್ದಾರೆ.
ಹೈದರಾಬಾದ್​ನಲ್ಲಿ ಟೆಂಗಿನ ಹೋಲ್​ ಸೆಲ್​ ವ್ಯಾಪಾರ ಮಾಡಿಕೊಂಡು ಉತ್ತಮ ಸ್ಥಿತಿಯಲ್ಲಿರುವ ಸಂಜುಕುಮಾರ ಹೂಗಾರ ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿರುವ ತನ್ನೂರಿನ ಬಡವರ ನೆರವಿಗೆ ಧಾವಿಸಿದ್ದು, ದಿನಸಿ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ನಿಂದ ಗ್ರಾಮಕ್ಕೆ ಬಂದಿರುವ ಯುವಕ ಗ್ರಾಮದಲ್ಲಿನ ಬಡವರ ಕಷ್ಟ ಕಂಡು ಗ್ರಾಮದ ಪ್ರತಿ ಕುಟುಂಬಕ್ಕೆ 25ಕೆ.ಜಿ ಅಕ್ಕಿ, 1ಕೆ.ಜಿ ಎಣ್ಣೆ ಪಾಕೆಟ್ ವಿತರಿಸಿ, ಗ್ರಾಮಸ್ಥರ ಪ್ರೀತಿಗೆ ಪಾತ್ರರಾರಿದ್ದಾರೆ. 150 ಕ್ವಿಂಟಲ್ ಅಕ್ಕಿ, 600 ಕೆ.ಜಿ ಎಣ್ಣೆ ಪ್ಯಾಕೆಟ್ ವಿತರಿಸಿದ್ದಾರೆ.
ಇವರ ತಂದೆ ತಾಯಿ ಹಿಂದೆ ಮೀನಕೇರಾ ಕ್ರಾಸ್ ಬಳಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಅಲ್ಪ ಹಣದಲ್ಲೇ ಸಂಕಷ್ಟದ ಮಧ್ಯೆ ಸಂಜುಕುಮಾರ ಅವರಿಗೆ ಪದವಿವರೆಗೆ ಶಿಕ್ಷಣ ಕೊಡಿಸಿದ್ದರು. 10-12 ವರ್ಷದ ಹಿಂದೆ ಕೆಲಸ ಅರಸಿ ಹೈದರಾಬಾದ್ಗೆ ಹೋಗಿದ್ದ ಸಂಜುಕುಮಾರ ಅವರು, ಅಲ್ಲಿಯೇ ಹೋಲ್ಸೇಲ್ ಟೆಂಗಿನ ವ್ಯಾಪಾರ ಆರಂಭಿಸಿದ್ದರು. ವ್ಯಾಪಾರ ಯಶಸ್ವಿಯಾಗಿ, ಸಾಗಿದ್ದು, ತಕ್ಕಮಟ್ಟಿನ ಆದಾಯ ಬರುತ್ತಿದೆ. ಇದೀಗ ಲಾಕ್ಡೌನ್ವೇಳೆ ಹುಟ್ಟಿದ ಊರಿಗೆ ಬಂದಿದ್ದು, ಜನರ ನೆರವಿಗೆ ಮುಂದಾಗಿದ್ದು, ಶ್ಲಾಘನೆಗೆ ಕಾರಣವಾಗಿದೆ.
ಪ್ರಸ್ತುತ ಇವರ ತಾಯಿ ಅವರು ಮೃತಪಟ್ಟಿದ್ದು, ಅವರ ಆಶಯದಂತೆ ಸಂಜುಕುಮಾರ ಅವರು ಧಾನ, ದಾಸೋಹ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ದಸರಾ ಸಮಯದಲ್ಲಿ ತುಳಜಾಪುರ ಪಾದಯಾತ್ರಿಗಳಿಗೆ ಹಣ್ಣಿನ ದಾಸೋಹ ಕೈಗೊಳ್ಳುತ್ತಿದ್ದಾರೆ. ಇದೀಗ ಬಡವರಿಗೆ ದಿನಸಿ ಕಿಟ್ ವಿತರಿಸಿ, ಮಾದರಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮದ ಗೆಳೆಯರಾದ ಮಾಣಿಕ ಚಂಗೋಲೆ, ಗಿರೀಶ ಅಫಲಪುರ, ಅಶೋಕ ಜಮಾದಾರ, ಸಲೀಂ ಪಟೇಲ್, ರವೀಂದ್ರ ಬಾಪುರ, ಸಂತೋಷ ಗುಪ್ತಾ ಸೇರಿ ಹಲವು ಸಾಥ್ ನೀಡಿದ್ದಾರೆ.