ಜಿಲ್ಲೆ

ಹುಚ್ಚೆದು ಕುಣಿಸಿದ ಕನಿಕಾ ಕಪೂರ್ ಗಾನಸುಧೆ

ಮೈಸೂರು: ಸೂರ್ಯಾಸ್ತವಾಗುತ್ತಿದ್ದಂತೆ ಇತ್ತ ವರ್ಣರಂಜಿತ ಲೋಕವೊಂದರ ಉದಯ. ಶ್ವೇತ ವರ್ಣದ ಚಪ್ಪರದ ಅಡಿಯಲ್ಲಿ ಸಂಗೀತದ ಭೋರ್ಗರೆತ. ಬಾಲಿವುಡ್ ಸಂಗೀತದ ಅಬ್ಬರ. ಈ ನಡುವೆ, ಬೇಡಿ ಡಾಲ್ ಖ್ಯಾತಿಯ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಸಂಗೀತಸುಧೆಯ ಕಮಾಲ್. ಇದಕ್ಕೆ ಯುವ ಸಮೂಹದ ನೃತ್ಯ ನರ್ತನ!

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಯುವ ದಸರಾದ 2ನೇ ದಿನವಾದ ಗುರುವಾರವೂ ಸಂಗೀತದ ನಿನಾದಕ್ಕೆ ಮೈಸೂರಿನ ಯುವರಾಜ-ಯುವರಾಣಿಯರು ಮನಸೋತರು. ಯುವ ಮನಸ್ಸುಗಳಿಗೆ ಸಂಗೀತದ ರಸದೌತಣವನ್ನೇ ಉಣಬಡಿಸಿದ್ದ ‘ಕನಿಕಾ’ ಹಾಡಿಗೆ ಮಾರು ಹೋದ ಯುವ ಮನಸ್ಸುಗಳು ಕೇಕೆ ಹಾಕಿ ಸಂಭ್ರಮಿಸಿದರು.

ಒಂದು ತಾಸು ತಡವಾಗಿ ವೇದಿಕೆ ಏರಿದ 44 ವರ್ಷ ಗಾಯಕಿ ತಮ್ಮ ಕಂಠಸಿರಿ ಮೂಲಕ ಯುವ ಮನಸ್ಸುಗಳ ಹೃದಯಕ್ಕೆ ಲಗ್ಗೆ ಹಾಕಿದರು. ಧೂಳೆಬ್ಬಿಸಿದ ಇವರ ಗೀತಗಾಯನಕ್ಕೆ ಸಭಿಕರನ್ನು ಹುಚ್ಚೆದ್ದು ಕುಣಿಸಿ, ತಾವು ನಲಿದರು.


‘ಹಲೋ ಮೈಸೂರು’ ಎಂದು ಹೇಳುತ್ತ ಪ್ರೇಕ್ಷಕರನ್ನು ಹುರಿದುಂಬಿಸಿದ ಇವರು, ಪುಷ್ಪಾ ಹಿಂದಿ ಸಿನಿಮಾದ ‘ಊ ಬೊಲೆಗಾ ಯಾ ಊ ಊ ಬೊಲೆಗಾ, ದಮಾ ದಮ್ ಮಸ್ತ್ ಕಲಂದರ್…. ಹೀಗೆ ರಂಗುರಂಗಿನ ಗೀತೆಗಳು ಕಿಚ್ಚು ಹಚ್ಚಿದವು. ಅವರ ಹಾಡಿನ ಮೋಡಿಗೆ ಯುವ ಮನಸ್ಸುಗಳು ತಲೆದೂಗಿದ್ದವು.


ಅಲ್ಲದೆ, ಇವರ ಗಾಯನ ಗಾರುಡಿಗೆ ಮರಳಾದ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಯುವ ಜನರೊಂದಿಗೆ ಕುಣಿದು ಸಂಭ್ರಮಿಸಿದರು. ಕನಿಕಾ ಕಪೂರ್ ಅವರನ್ನು ಸಚಿವ ಬಿ.ಸಿ.ಪಾಟೀಲ್, ರಾಜ್ಯಸಭಾ ಸದಸ್ಯ ಜಗ್ಗೇಶ್ ಸನ್ಮಾನಿಸಿದರು.


ಹಾಸ್ಯ ಚಟಾಕಿ ಹಾರಿಸುವ ಮೂಲಕ ಗಾಯಕಿ ಕನಿಕಾ ಕಪೂರ್ ಅವರನ್ನು ಹೊಗಳಿದ ಜಗ್ಗೇಶ್, ‘ಈಯಮ್ಮನ ನೋಡೋದಕ್ಕೆ ಬಂದಿದ್ದೀರಿ. ಯಾರು ಯಾರು ಈಯಮ್ಮನ ತರ ಹುಡುಗಿ ಬೇಕು ಅಂದುಕೊಂಡಿದ್ದೀರೊ ಸಿಗಲಿ. ನಾಳೆ ತೋತಾಪುರಿ ಸಿನಿಮಾ ಬಿಡುಗಡೆ ಆಗತ್ತಿದೆ ನೋಡಿ ಆಶೀರ್ವದಿಸಿ’ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ, ಡಿಕೆಡಿ ಖ್ಯಾತಿಯ ಪವನ್ ಮಾಸ್ಟರ್ ಹಾಗೂ ರುದ್ರ ಮಾಸ್ಟರ್ ತಂಡದವರು ವಿವಿಧ ಹಾಡಿಗೆ ಹೆಜ್ಜೆ ಹಾಕಿದರು. ಜಿಲ್ಲಾ ನೃತ್ಯ ನಿರ್ದೇಶಕರ ತಂಡದವರು ಕೆ.ಜಿ.ಎಫ್ ಚಿತ್ರದ ಹಾಡುಗಳಿಗೆ ನರ್ತಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದರು.


ರಾಬರ್ಟ್ ಚಿತ್ರದ ಬ್ರದರ್ ಫ್ರಮ್ ಅನದರ್ ಬ್ರದರ್, ವಿಕ್ರಾಂತ್ ರೋಣ, ಟಗರು ಹಾಗೂ ದಿ ವಿಲನ್ ಚಿತ್ರದ ಹಾಡುಗಳಿಗೆ ವೇದಿಕೆ ಮೇಲೆ ನೃತ್ಯ ಮಾಡುವವರ ಜತೆಗೂ ಸಭಿಕರು ಸಹ ಕುಣಿದು ಕುಪ್ಪಳಿಸಿತು. ಮಂಗಳೂರಿನ ವಿಯಾನ್ಸ್ ತಂಡದವರು ಮಾಡಿದ ತಯ್ಯಂ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿತು.
ಆಪ್ತಮಿತ್ರ ಖ್ಯಾತಿಯ ಶ್ರೀಧರ್ ಜೈನ್ ಮತ್ತು ತಂಡದವರು ಮಾಡಿದ ಸತ್ಯಹರಿಶ್ಚಂದ್ರ ಚಿತ್ರದ ಮತ ಕೀಳ್ಯಾವುದೋ ಹುಚ್ಚಪ್ಪ, ರಘು ದೀಕ್ಷಿತ್ ಅವರ ಲೋಕದ ಕಾಳಜಿ ಮಾಡುತಿನಂತಿ ಹಾಡಿಗೆ ಮನಮೋಹಕ ನೃತ್ಯ ನೆರೆದಿದ್ದ ಸಭಿಕರನ್ನು ತಲೆದೂಗುವಂತೆ ಮಾಡಿತು.

ಆತಂಕ ಸೃಷ್ಟಿಸಿದ ಆಕಸ್ಮಿಕ ಬೆಂಕಿ
ಮಹಾರಾಜ ಕಾಲೇಜು ಮೈದಾನದ ಕೊನೇ ಭಾಗದಲ್ಲಿ ಸಂಜೆ 7.30ರ ಹೊತ್ತಿನಲ್ಲಿ ಆಕಸ್ಮಿಕ ಬೆಂಕಿಯಿಂದ ಆತಂಕ ಸೃಷ್ಟಿಯಾಗಿತ್ತು.
ವೇದಿಕೆಯಿಂದ 300 ಮೀಟರ್ ದೂರದಲ್ಲಿ ಜನರ ಮಧ್ಯ ತಳ್ಳುವ ಗಾಡಿಗಳಲ್ಲಿ ತಿಂಡಿ, ತಿನಿಸು ಮಾರಾಟ ಮಾಡುವವರನ್ನು ಪೊಲೀಸರು ದೂರಕ್ಕೆ ಸರಿಯುವಂತೆ ಹೇಳಿದ್ದಾರೆ. ಈ ವೇಳೆ ಪಾಪ್‌ಕಾರ್ನ್ ತಳ್ಳುವ ಗಾಡಿಯವನು ವಾಪಸ್ ಹಿಂದಕ್ಕೆ ಹೋಗುವಾಗ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಆಳೆತ್ತರಕ್ಕೆ ಹಬ್ಬಿದ ಹಿನ್ನೆಲೆಯಲ್ಲಿ ಜನರು ಆತಂಕಕ್ಕೀಡಾದರು. ತಕ್ಷಣಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.