ಹುಕ್ಕೇರಿ: ಇಲ್ಲಿನ ಹುಕ್ಕೇರಿಯ ಅರ್ಬನ್ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೮೦ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶತಮಾನದ ಸಂಭ್ರಮದಲ್ಲಿರುವ ಬ್ಯಾಂಕ್ ಪ್ರಸಕ್ತ ವರ್ಷ ೧೦೮.೮೩ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ೯೪.೫೦ ಕೋಟಿ ರೂ. ಠೇವು ಸಂಗ್ರಹಿಸಿ, ೫೮.೯೦ ಕೋಟಿ ರೂ. ಸಾಲ ವಿತರಿಸಲಾಗಿದೆ. ೩೮.೧೯ ಕೋಟಿ ರೂ. ಗುಂತಾವಣೆ ಮಾಡಲಾಗಿದೆ. ೭೪೪.೬೧ ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿದೆ ಎಂದರು.
ನಿರ್ದೇಶಕ ಸೋಮಣ್ಣ ಗಂಧ ಮಾತನಾಡಿ, ೨೦೨೮ರಲ್ಲಿ ಶತಮಾನೋತ್ಸವ ಆಚರಿಸುವ ಸಂಕಲ್ಪ ಮಾಡಲಾಗಿದೆ. ಜತೆಗೆ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದರು.
ಪ್ರಧಾನ ವ್ಯವಸ್ಥಾಪಕ ಕೆ.ಬಿ. ಬಂದಾಯಿ ಮಾತನಾಡಿ, ಪ್ರಧಾನ ಕಚೇರಿ ಸೇರಿ ೬ ಶಾಖೆಗಳಿದ್ದು, ಶೀಘ್ರದಲ್ಲಿ ಬೆಳಗಾವಿ ನಗರದಲ್ಲಿ ಇನ್ನೊಂದು ಶಾಖೆ ಪ್ರಾರಂಭಿಸುವ ಜತೆ ಮೊಬೈಲ್ ಬ್ಯಾಂಕಿಂಗ್, ಯುಪಿಐ ಸೇರಿ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಪ್ರಭು ಸಾಂಬಾರೆ, ಮೌನೇಶ ಪೋತದಾರ, ರಾಜಕುಮಾರ ಬಾಗಲಕೋಟೆ ಇತರರಿದ್ದರು.