ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹುಕ್ಕೇರಿ ಹಿರೇಮಠ ಪ್ರತಿಷ್ಠಾನದಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ಆಂಬುಲೆನ್ಸ್ ಹಸ್ತಾಂತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಂಕರಗೌಡ ಪಾಟೀಲ ಇತರರು ಇದ್ದರು. 
ಜಿಲ್ಲೆ

ಹುಕ್ಕೇರಿ ಶ್ರೀಗಳ ಸೇವೆ ಶ್ಲಾಘನೀಯ

ಬೆಳಗಾವಿ: ಸಮಾಜಮುಖಿ ಕೆಲಸ ಮಾಡುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಜಿಲ್ಲೆಗೆ ಎರಡು ಆಂಬುಲೆನ್ಸ್ ನೀಡಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಹುಕ್ಕೇರಿ ಹಿರೇಮಠದ ಪ್ರತಿಷ್ಠಾನದಿಂದ ಶುಕ್ರವಾರ ಜಿಲ್ಲಾಡಳಿತಕ್ಕೆ ನೀಡಿದ ಆಂಬುಲೆನ್ಸ್‌ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕರೊನಾ ಸೋಂಕಿನಿಂದ ಸಾವು-ನೋವು ಹೆಚ್ಚಾಗುತ್ತಿವೆ. ಆರ್ಥಿಕ ಪರಿಸ್ಥಿತಿಯೂ ಕುಸಿದಿದೆ. ಇಂಥ ಸಂದರ್ಭದಲ್ಲಿ ಶ್ರೀಮಠವು ಜನರಿಗೆ ನೆರವಾಗಿರುವುದು ಶ್ಲಾಘನೀಯ ಎಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಗರ ಹಾಗೂ ಹುಕ್ಕೇರಿ ತಾಲೂಕಿನ ಜನರ ಅನುಕೂಲಕ್ಕಾಗಿ ಆಂಬುಲೆನ್ಸ್ ನೀಡಲಾಗಿದೆ. ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವ ಕೈಬಿಟ್ಟು ಜನರ ಸೇವೆ ಮಾಡಲಾಗುತ್ತಿದೆ. ಹಿರೇಮಠದಿಂದ ಕರೊನಾ ಮೊದಲನೇ ಅಲೆಯಲ್ಲಿ 12 ಲಕ್ಷ ರೂ. ಮೌಲ್ಯದ ಆಹಾರದ ಕಿಟ್ ಒದಗಿಸಲಾಗಿದೆ. ನೆರೆ ಬಂದಾಗಲೂ ಶ್ರೀಮಠ ಜನರ ಸೇವೆ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ವೈದ್ಯರು ಹಳ್ಳಿ ಕಡೆ ಹೋಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ಹುಕ್ಕೇರಿ ಹಿರೇಮಠ ಜಿಲ್ಲೆಗೆ ಆದರ್ಶವಾಗಿದೆ ಎಂದರು. ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ಬುಡಾ ಇಂಜಿನಿಯರ್ ಮಹಾಂತೇಶ ಹಿರೇಮಠ, ವೀರೇಶ ಹಿರೇಮಠ, ಅರುಣ ಐಹೊಳೆ ಇದ್ದರು.