ಬೆಳಗಾವಿ ನಗರದಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಗೆ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಭಾನುವಾರ ಭೇಟಿ ನೀಡಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು. ವಿರೂಪಾಕ್ಷಯ್ಯ ನೀರಲಗಿಮಠ, ಸೋಮಶೇಖರ ಹಿರೇಮಠ, ಸಂಗಯ್ಯ ಶಾಸ್ತ್ರಿ ಇತರರಿದ್ದರು. 
ಜಿಲ್ಲೆ

ಹುಕ್ಕೇರಿ ಮಠದಿಂದ ಸಮಾಜ ಒಗ್ಗೂಡಿಸುವ ಕಾರ್ಯ

ಬೆಳಗಾವಿ: ನಗರದಲ್ಲಿನ ಹುಕ್ಕೇರಿ ಹಿರೇಮಠದ ಶಾಖೆಯು ಎಲ್ಲ ಸಮುದಾಯ, ಸಂಪ್ರದಾಯ ಮತ್ತು ಸಮಾಜ ಸೇವಕರನ್ನು ಒಗ್ಗೂಡಿಸುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ನಗರದ ಹುಕ್ಕೇರಿ ಹಿರೇಮಠದ ಶಾಖೆಗೆ ಭಾನುವಾರ ಭೇಟಿ ನೀಡಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು. ಹುಕ್ಕೇರಿ ಹಿರೇಮಠದಲ್ಲಿ ಜಾತಿ, ಮತ, ಪಂಥಗಳ ಗೊಡವೆಗಳಿಲ್ಲ. ಬಂದವರನ್ನು ಗೌರವಿಸಿ, ಮಾರ್ಗದರ್ಶನ ಪಡೆಯುವವರಿಗೆ, ಮಾರ್ಗದರ್ಶನ ನೀಡಿ ಪ್ರೀತಿಯಿಂದ ಕಾಣುವ ಅಪರೂಪದ ಕೇಂದ್ರವಾಗಿದೆ ಎಂದರು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಾಮಾಜಿಕ ಕಾರ್ಯಗಳ ಜತೆಗೆ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಅಲ್ಲದೆ, ಪ್ರವಾಹ ಸಂದರ್ಭದಲ್ಲಿ ಎಲ್ಲ ಸಮುದಾಯದ ಜನರಿಗೆ ಕೈ ತುತ್ತು ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿರುವುದು ಅಭಿಮಾನದ ಸಂಗತಿ ಎಂದು ಹೇಳಿದರು.

ಕರೊನಾ ಸಂದರ್ಭದಲ್ಲಿಯೂ ಜಿಲ್ಲೆಯ ವಿವಿಧೆಡೆ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಕೋವಿಡ್ ತೊಲಗಿಸಲು ಧನ್ವಂತರಿ ಹೋಮ ಮಾಡಿದ್ದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಎಲ್ಲ ಕಡೆಯೂ ಹೋಮ ಮಾಡಿಸುವಂತೆ ಸಲಹೆ ನೀಡಿದ್ದರು. ಅಲ್ಲದೆ, ಜಿಲ್ಲೆಯ ಜನರ ಅನುಕೂಲಕ್ಕಾಗಿ ಸ್ವಾಮೀಜಿ ಎರಡು ಆಂಬುಲೆನ್ಸ್ ನೀಡುವ ಮೂಲಕ ಮಾದರಿಯಾಗಿದ್ದಾರೆ ಎಂದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆಎಲ್‌ಇ ಕಾರ್ಯಾಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಅಪರೂಪದ ಕಾರ್ಯಗಳನ್ನು ಮಹಾಂತೇಶ ಕವಟಗಿಮಠ ಅವರು ಮಾಡುತ್ತಿದ್ದಾರೆ. ಸದ್ಯ ರಾಜ್ಯದ ತುಂಬ ಸಾಮಾಜಿಕ ಕಾರ್ಯ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ. ಅಧಿಕಾರ ಭಗವಂತ ಕೊಟ್ಟ ಅವಕಾಶ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನಪರ ಕಾರ್ಯಗಳನ್ನು ಇನ್ನೂ ಹೆಚ್ಚು ಮಾಡಲಿ ಎಂದರು. ಸೋಮಶೇಖರ ಹಿರೇಮಠ, ಸಂಗಯ್ಯ ಶಾಸ್ತ್ರಿ, ವಿದ್ವಾನ್
ಚಂದ್ರಶೇಖರ ಶಾಸ್ತ್ರಿ, ಶಂಕರಯ್ಯ ಶಾಸ್ತ್ರಿ, ಶಿವಾನಂದ ಹಿರೇಮಠ ಇತರರು ಇದ್ದರು.