ಧಾರವಾಡ: ಲಾಕ್ಡೌನ್ ಮುಂದುವರಿಯುವುದರಿಂದ ಹೊರ ರಾಜ್ಯಗಳಿಂದ ಆಗಮಿಸುವ ಮತ್ತು ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ಅವಳಿ ನಗರದಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಆಗಮನ ಮತ್ತು ನಿರ್ಗಮನ ಕೇಂದ್ರಗಳನ್ನು ಗುರುತಿಸಲಾಗುತ್ತಿದೆ. ಈ ಸ್ಥಳಗಳಲ್ಲಿ ಟಿಕೆಟ್ ಕೌಂಟರ್ಗಳು, ವೈದ್ಯಕೀಯ ತಪಾಸಣೆ ಹಾಗೂ ಮೂಲ ಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಲಸೆ ಕಾರ್ವಿುಕರು, ಯಾತ್ರಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಹೊರ ರಾಜ್ಯಗಳಿಗೆ ಕಳುಹಿಸುವುದು ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರನ್ನು ತಪಾಸಣೆಗೊಳಪಡಿಸಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1000 ಕಿ.ಮೀ.ವರೆಗಿನ ಅಂತರದಲ್ಲಿರುವ ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳು ಹಾಗೂ ಇತರ ಸ್ಥಳಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್ಗಳನ್ನು ಬಿಡಲಾಗುವುದು. ಸಾಮಾಜಿಕ ಅಂತರದ ನಿಯಮದಡಿ ಆಸನಗಳನ್ನು ಕಲ್ಪಿಸಲಾಗುವುದು. ಅದೇ ರೀತಿ ದೂರದ ರಾಜ್ಯಗಳಿಗೆ ತೆರಳುವ ಪ್ರಯಾಣಿಕರಿಗೆ ರೈಲು ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಟಿಕೆಟ್ಗಳನ್ನು ಪಡೆದು ಪ್ರಯಾಣಿಸಬಹುದು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ವಾಹನಗಳ ಆಗಮನ ಕೇಂದ್ರ ಸ್ಥಾಪಿಸಲಾಗುವುದು. ಹುಬ್ಬಳ್ಳಿ ಹೊಸ ಬಸ್ನಿಲ್ದಾಣ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣಗಳಲ್ಲಿ ನಿರ್ಗಮನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಸ್ಥಳಗಳಲ್ಲಿ ವೈದ್ಯಕೀಯ ತಪಾಸಣೆಗೆ ವೈದ್ಯರು, ನರ್ಸ್, ಆರೋಗ್ಯ ಸಹಾಯಕರು, ನೋಡಲ್ ಅಧಿಕಾರಿಗಳು ಹಾಗೂ ಡೇಟಾ ಎಂಟ್ರಿ ಆಪರೇಟರ್ಗಳನ್ನು ಸರದಿಯಲ್ಲಿ ನೇಮಿಸಲಾಗುವುದು. ಅಲ್ಲಿ ರಾಜ್ಯವಾರು ಕೌಂಟರ್ಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಟಿಕೆಟ್ಗಳನ್ನು ನೀಡಿ ಅವರು ವಾಹನ ಅಥವಾ ರೈಲು ಮೂಲಕ ತೆರಳಲು ವ್ಯವಸ್ಥೆ ಮಾಡಬೇಕು. ಹೊರ ರಾಜ್ಯಗಳಿಂದ ಬರುವ ನಾಗರಿಕರನ್ನು ಆರೋಗ್ಯ ತಪಾಸಣೆ ಮಾಡಿ, ಹೋಂ ಕ್ವಾರಂಟೈನ್ ಮೊಹರು ಹಾಕಿ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದರು.
ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾತನಾಡಿ, ಹೊರ ರಾಜ್ಯಗಳಿಂದ ಆಗಮಿಸುವ ಮತ್ತು ಹೊರ ರಾಜ್ಯಗಳಿಗೆ ತೆರಳುವ ವಾಹನಗಳ ಸಂಖ್ಯೆಗಳನ್ನು ಮುಂಚಿತವಾಗಿ ಪೊಲೀಸರಿಗೆ ಒದಗಿಸಿದರೆ ಚೆಕ್ಪೋಸ್ಟ್ಗಳಿಗೆ ಮಾಹಿತಿ ನೀಡಲಾಗುವುದು. ಅಗತ್ಯ ಭದ್ರತಾ ವ್ಯವಸ್ಥೆಯನ್ನು ಆಗಮನ ಮತ್ತು ನಿರ್ಗಮನ ಕೇಂದ್ರಗಳಿಗೆ ನೀಡಲಾಗುವುದು ಎಂದರು.
ಜಿಪಂ ಸಿಇಒ ಡಾ.ಬಿ.ಸಿ. ಸತೀಶ್ ಮಾತನಾಡಿ, ಕೋವಿಡ್ ಪ್ರಕರಣಗಳ ಸಂಖ್ಯೆ ಅಧಿಕವಾಗಿರುವ ರಾಜಸ್ಥಾನ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ವಲಸೆ ಬರುವವರಿಗೆ ತಕ್ಷಣ ಅವಕಾಶ ನೀಡದಿರಲು ಕೋರಿ ರಾಜ್ಯಸರ್ಕಾರಕ್ಕೆ ಪತ್ರ ಬರೆಯುವುದು ಒಳ್ಳೆಯದು. ಆದರೆ ಆ ರಾಜ್ಯಗಳಿಗೆ ತೆರಳುವವರಿಗೆ ಅವಕಾಶ ನೀಡಬಹುದು ಎಂದರು.
ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ ಕಲ್ಮಾಡಿ, ಡಿವೈಎಸ್ಪಿ ರವಿ ನಾಯ್ಕ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್, ಸಾರಿಗೆ ಸಂಸ್ಥೆ, ಕಾರ್ವಿುಕ ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ನೋಂದಣಿ ಮಾಡಿಕೊಳ್ಳಲು ಸೂಚನೆ
ಧಾರವಾಡ: ಲಾಕ್ಡೌನ್-3 ಮುಂದುವರಿಯುವುದರಿಂದ ಕರ್ನಾಟಕ ರಾಜ್ಯದಿಂದ ದೇಶದ ಬೇರೆ ರಾಜ್ಯಗಳಿಗೆ ಹೋಗುವವರು ಹಾಗೂ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರು ರಾಜ್ಯ ಸರ್ಕಾರದ ಸೇವಾಸಿಂಧು ಯೋಜನೆಯ ವೆಬ್ಸೈಟ್ ಮೂಲಕ ತಮ್ಮ ಹೆಸರು, ವಿವರಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪ್ರಯಾಣಕ್ಕೆ ಅನುಮತಿ ಬಯಸುವವರು ಈ ವೆಬ್ಸೈಟ್ ಮೂಲಕ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ನಮೂದಿಸಬೇಕು. ವಲಸೆ ಕಾರ್ವಿುಕರು, ಯಾತ್ರಿ, ಪ್ರವಾಸಿಗರು, ವಿದ್ಯಾರ್ಥಿ, ಯಾವ ವರ್ಗಕ್ಕೆ ಸೇರಿದವರು ಎಂಬುದನ್ನು ಆಯ್ಕೆ ಮಾಡಬೇಕು. ವರ್ತಮಾನದ ವಾಸದ ವಿಳಾಸ, ತಲುಪಬೇಕಾದ ವಿಳಾಸ, ಅಂಚೆ ಪಿನ್ಕೋಡ್, ಪ್ರಯಾಣದ ವ್ಯವಸ್ಥೆ, ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ದಾಖಲಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ವೈದ್ಯಕೀಯ ತುರ್ತ, ಔಷಧಿ ಪೂರೈಕೆ ಮತ್ತಿತರ ಅನಿವಾರ್ಯ ಕಾರಣಗಳಿಗೆ ರಾಜ್ಯದೊಳಗಿನ ಬೇರೆ ಜಿಲ್ಲೆಗಳಿಗೆ ಒಂದು ಬಾರಿ ತೆರಳಲು ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಅಥವಾ 9449847646/ 9449847641 ವಾಟ್ಸ್ಅಪ್ ಸಂಖ್ಯೆಗಳು ಅಥವಾ ಜಿಲ್ಲಾಡಳಿತದ ಸಹಾಯವಾಣಿ 1077 ಮೂಲಕ ನೋಂದಾಯಿಸಿಕೊಳ್ಳಬಹುದು.