ಜಿಲ್ಲೆ

ಹೀರಾದಲ್ಲಿ ಮರುಮತದಾನ ನಡೆಸಿ

ಸಿರವಾರ: ಹೀರಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಅಧಿಕಾರಿಯಾಗಿದ್ದ ಸುಂದರಬಾಬು ಅಕ್ರಮವೆಸಗಿದ್ದು, ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ ಸಿದ್ದನಗೌಡಗೆ 8 ಜನ ಸದಸ್ಯರು ಶುಕ್ರವಾರ ಮನವಿ ಸಲ್ಲಿಸಿದರು.

ಒಟ್ಟು 16 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಮೂವರು ಅನಕ್ಷರಸ್ಥ ಸದಸ್ಯೆಯರಿಗೆ ಮಾರ್ಗದರ್ಶನ ಮಾಡುವ ನೆಪದಲ್ಲಿ ಅಕ್ರಮ ಎಸಗಲಾಗಿದೆ. ಸದಸ್ಯೆಯರು ಹೇಳಿದ ವ್ಯಕ್ತಿಗೆ ಮತ ಹಾಕದೆ ಬೇರೆಯವರಿಗೆ ಮತ ಹಾಕುವ ಮೂಲಕ ಪ್ರಭಾವಿಗಳ ಕೈಗೊಂಬೆಯಂತೆ ಚುನಾವಣಾಧಿಕಾರಿ ವರ್ತಿಸಿದ್ದಾರೆ ಎಂದು ದೂರಿದರು.

ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿರುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಯನ್ನು ಶಿಕ್ಷೆಗೆ ಗುರಿ ಪಡಿಸಬೇಕು. ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು 8 ಜನ ಸದಸ್ಯರು ತಹಸೀಲ್ದಾರ್‌ಗೆ ಬರೆದ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಮುಖಂಡ ಕೆಂಚಣ್ಣ ಯಾದವ್ ಇತರರಿದ್ದರು.