ಜಿಲ್ಲೆ

ಹಿರೇಮಠದ ಸೋಮಶೇಖರ ಶ್ರೀಗಳು ವಿಧಿವಶ

ನರೇಗಲ್ಲ: ಸಮೀಪದ ಅಬ್ಬಿಗೇರಿ ಹಿರೇಮಠದ ಸೋಮಶೇಖರ ಸ್ವಾಮೀಜಿ (69) ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಲಿಂಗೈಕ್ಯೆರಾಗಿದ್ದಾರೆ.

ವಿವಿಧ ಮಠಗಳ ಸ್ವಾಮೀಜಿ ಹಾಗೂ ಅಪಾರ ಭಕ್ತ ಸಮೂಹದ ಮಧ್ಯ ನರೇಗಲ್ಲ ರಸ್ತೆಯ ನೂತನ ಹಿರೇಮಠದಲ್ಲಿ ವೀರಶೈವ ಧರ್ಮದ ವಿಧಿ ವಿಧಾನಗಳ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನೆರವೇರಿತು.

ಶುಕ್ರವಾರ ಸಂಜೆ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಗಿನ ಜಾವ 2 ಗಂಟೆಗೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಶ್ರೀಗಳ ಪಾರ್ಥಿವ ಶರಿರವನ್ನು ಅಬ್ಬಿಗೇರಿಯ ಹಳೆಯ ಹಿರೇಮಠದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಹಲವು ಮಠಗಳ ಸ್ವಾಮೀಜಿಗಳು, ಭಕ್ತರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಶನಿವಾರ ಮಧ್ಯಾಹ್ನ 3 ಗಂಟೆಗೆ ಪಾರ್ಥಿವ ಶರೀರವನ್ನು ಸಕಲ ವಾದ್ಯವೃಂದ, ಭಜನಾ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನರೇಗಲ್ಲ ರಸ್ತೆಯ ನೂತನ ಮಠದ ಆವರಣಕ್ಕೆ ತರಲಾಯಿತು.

ಶ್ರೀಗಳು ನೂತನ ಮಠದಲ್ಲಿ ತಮ್ಮ ಕ್ರಿಯಾ ಸಮಾಧಿಯನ್ನು ಈ ಹಿಂದೆಯ ಸಿದ್ಧಗೊಳಿಸಿದ್ದರು. ಎರಡು ದಿನಗಳ ಹಿಂದೆ ಸಮಾಧಿಯಲ್ಲಿ ಇಳಿದು ಭಾವಚಿತ್ರವನ್ನು ತೆಗೆಸಿಕೊಂಡಿದ್ದರು ಎಂದು ನೆನೆದು ಭಕ್ತರು ಕಂಬನಿ ಮಿಡಿದರು. ರಂಭಾಪುರಿ ಶ್ರೀಗಳು ಶೋಕ ಸಂದೇಶ ಕಳುಹಿಸಿ, ಅಬ್ಬಿಗೇರಿ ಹಿರೇಮಠದ ಉತ್ತರಾಧಿಕಾರಿಯನ್ನಾಗಿ ತುಮಕೂರ ಜಿಲ್ಲೆಯ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳಿಗೆ ಲಿಂಗೈಕ್ಯ ಶ್ರೀಗಳ ರುದ್ರಾಕ್ಷಿ, ಪೇಟವನ್ನು ತೊಡಿಸಲಾಯಿತು.

ಅಂತ್ಯಕ್ರಿಯೆ ವಿಧಿವಿಧಾನಗಳಲ್ಲಿ ಭಾಗವಹಿಸಲು ಸ್ವಾಮೀಜಿಗಳು ಸೇರಿದಂತೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಠದ ಆವರಣದಲ್ಲಿ ವಿವಿಧೆಡೆ ದೊಡ್ಡ ಟಿವಿ ಪರದೆಯ ಮೂಲಕ ಅಂತಿಮ ವಿಧಿ ವಿಧಾನಗಳನ್ನು ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಕುದರಿಮೊತಿಯ ವಿಜಯ ಮಹಾಂತೇಶ ಸ್ವಾಮೀಜಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಸ್ವಾಮೀಜಿ, ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಸ್ವಾಮೀಜಿ, ಚಳಗೇರಿ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶ್ರೀಗಳು, ಅರಳಲೆಮಠದ ವಿಜಯಾನಂದ ಸ್ವಾಮೀಜಿ, ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗಾನೂರ ರೇಣುಕಾಚಾರ್ಯಮಠದ ಚಂದ್ರಶೇಖರ ಸ್ವಾಮೀಜಿ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಶ್ರೀಶೈಲಪ್ಪ ಬಿದರೂರ ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಬ್ಬಿಗೇರಿ ಹಿರೇಮಠ ತನ್ನದೇ ಆದ ಇತಿಹಾಸ ಹೊಂದಿದೆ. ಈ ಮಠದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಜಗದ್ಗುರುಗಳಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಂಸ್ಕೃತ ಪಾಠ ಶಾಲೆ ಹೊಂದಿದ ಹೆಗ್ಗಳಿಕೆ ಅಬ್ಬಿಗೇರಿ ಹಿರೇಮಠಕ್ಕೆ ಸಲ್ಲುತ್ತದೆ. ಶ್ರೀಗಳು ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ಅವರು ಲಿಂಗೈಕ್ಯರಾಗಿರುವುದರಿಂದ ಧಾರ್ವಿುಕ ಕ್ಷೇತ್ರ ಬಡವಾಗಿದೆ. ಸ್ವಾಮೀಜಿಗಳ ಮಾರ್ಗದಲ್ಲಿ ನಡೆದು,ಶ್ರೀಮಠದ ಮೂಲಕ ಜನರಲ್ಲಿ ಧಾರ್ವಿುಕ ಸಂಸ್ಕಾರವನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತದೆ. | ವೀರಭದ್ರ ಶಿವಾಚಾರ್ಯರು ಅಬ್ಬಿಗೇರಿ ಹಿರೇಮಠದ ಉತ್ತರಾಧಿಕಾರಿ

ರಂಭಾಪುರಿ ಜಗದ್ಗುರುಗಳು ಸಂತಾಪ

ಗದಗ: ರೋಣ ತಾಲೂಕಿನ ಅಬ್ಬಿಗೇರಿ ಹಿರೇಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಲಿಂಗೈಕ್ಯರಾಗಿರುವುದು ಅತ್ಯಂತ ವಿಷಾದವನ್ನು ಉಂಟು ಮಾಡಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ಸೂಚಿಸಿದ್ದಾರೆ.

ಲಿಂ. ಸೋಮಶೇಖರ ಶ್ರೀಗಳು ಚಿಕ್ಕ ವಯಸ್ಸಿನಲ್ಲಿ ಪಟ್ಟಾಧಿಕಾರಿಗಳಾಗಿ ಆ ಭಾಗದಲ್ಲಿ ವೀರಶೈವ ಧರ್ಮ, ಸಂಸ್ಕೃತಿಯನ್ನು ಪ್ರಸಾರ ಮಾಡಿ ಭಕ್ತರಿಗೆ ಸಂಸ್ಕಾರ ಕೊಡುತ್ತಿದ್ದರು. ಇತ್ತೀಚೆಗೆ ನೂತನ ಮಠ ನಿರ್ವಿುಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದರು. ಶ್ರೀ ಜಗದ್ಗುರು ರಂಭಾಪುರಿ ಪೀಠದ ಜತೆಗೆ ಅನ್ಯೋನ್ಯ ಸಂಪರ್ಕ ಹೊಂದಿದ್ದ ಶ್ರೀಗಳು, ತಮ್ಮ ಅಧ್ಯಯನ ಕಾಲದಿಂದಲೂ ನಮ್ಮೊಂದಿಗೆ ಇದ್ದು ಕೆಲಸ ಮಾಡಿದ ಅಗ್ಗಳಿಕೆ ಅವರದು. ಶ್ರೀ ರಂಭಾಪುರಿ ಪೀಠದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅಬ್ಬಿಗೇರಿ ಹಿರೇಮಠದಿಂದ ವಿಶೇಷ ಅನ್ನದಾಸೋಹ ಮಾಡಿಕೊಂಡು ಬಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಂಥ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಇದ್ದರೂ ಕೋವಿಡ್-19 ಕಾರಣದಿಂದ ಸಾಧ್ಯವಾಗಲಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಲಿಂ. ಶ್ರೀಗಳವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅಗಲಿಕೆಯಿಂದ ಉಂಟಾದ ದು:ಖ ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮನು ಮಠದ ಭಕ್ತ ಮಂಡಳಿಗೆ ಅನುಗ್ರಹಿಸಲಿ ಎಂದು ಜಗದ್ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.