ಜಿಲ್ಲೆ

ಹಿರೀಸಾವೆಯಲ್ಲಿ ರಾಜಕಾಲುವೆ ನಿರ್ಮಾಣಕ್ಕೆ ಚಾಲನೆ

reportermys


ಚನ್ನರಾಯಪಟ್ಟಣ: ಶ್ರವಣಬೆಳಗೊಳ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮಾಡಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃ?್ಣ ಹೇಳಿದರು.


ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, 237 ಮೀಟರ್ ರಾಜಕಾಲುವೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.


ಈ ಕಾಲುವೆಯ ಪಕ್ಕದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದು ಇಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ರಸ್ತೆಗೆ ಅಗಲವಾಗಿ ಜಾಗ ಇರಬೇಕು ಮತ್ತು ಅಗತ್ಯ ಇರುವ ಕಡೆ ಸಣ್ಣ ಸೇತುವೆ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಡಿಸಿಸಿ ಬ್ಯಾಂಕ್ ಸಮೀಪ ಇರುವ ರಾಜ್ಯ ಹೆದ್ದಾರಿ 8 ರ ಸೇತುವೆ ಶಿಥಿಲಗೊಂಡಿದೆ. ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು. ಅಲ್ಲದೇ ಗ್ರಾಮದ ಪರಿಮಿತಿಯಲ್ಲಿ ಅಗತ್ಯವಿರುವ ಕಡೆ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.


ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹಿರೀಸಾವೆಯ ಶ್ರವಣಬೆಳಗೊಳ ರಸ್ತೆಯಲ್ಲಿ ನೂತನವಾಗಿ ಆರಂಭಿಸಿರುವ ನಂದಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಶಾಸಕರು ಉದ್ಘಾಟಿಸಿದರು.


ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಸದಸ್ಯರಾದ ಬಸವರಾಜು, ಹೊನ್ನೇನಹಳ್ಳಿ ಲೋಕೇಶ್, ಪಿಡಿಒ ದರ್ಶನ್, ಕಾರ್ಯದರ್ಶಿ ಚೇತನ್, ಮುಖಂಡರಾದ ರವಿಕುಮಾರ್, ಎಚ್.ಜಿ.ಮಂಜುನಾಥ್, ಹೊನ್ನೇನಹಳ್ಳಿ ಬಾಬು, ಬೊರೇಗೌಡ, ಎಂಜಿನಿಯರ್ ಮಂಜುನಾಥ್ ಹಾಗೂ ಇತರರು ಇದ್ದರು.