ಜಿಲ್ಲೆ

ಹಿರೀಸಾವೆ ಬಾಲಕರ ಶಾಲೆಗೆ ಚಾಂಪಿಯನ್

ಹಿರೀಸಾವೆ: ಪಟ್ಟಣದ ಗಂಗಾಧರ್ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹಿರೀಸಾವೆ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಬಾಲಕಿಯರ ವಿಭಾಗದಲ್ಲಿ ದಿಡಗ ಗ್ರಾಮದ ಹೊಯ್ಸಳ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿನಿಯರು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ದರ್ಶನ್ ಹಾಗೂ ಬಾಲಕಿಯರ ವಿಭಾಗದಲ್ಲಿ ಸ್ಮಿತಾ ವೈಯಕ್ತಿಕ ಚಾಂಪಿಯನ್ ಪಟ್ಟಕ್ಕೆ ಭಾಜನರಾಗಿದ್ದಾರೆ.


ಶಿಕ್ಷಣ ಇಲಾಖೆ ಹಾಗೂ ಜ್ಞಾನಪ್ರಭಾ ಇಂಟರ್‌ನ್ಯಾಷನಲ್ ಶಾಲೆಯ ಸಹಯೋಗದಲ್ಲಿ ಮಂಗಳವಾರ ಹಾಗೂ ಬುಧವಾರ ಕ್ರೀಡಾಕೂಟ ಜರುಗಿದ್ದು, 27 ಶಾಲೆಗಳಿಂದ ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ಒಟ್ಟು 800 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಹಿರೀಸಾವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು ಕಬಡ್ಡಿ-ಪ್ರಥಮ, ವಾಲಿಬಾಲ್-ದ್ವಿತೀಯ, 600 ಮೀಟರ್ ಓಟ-ಪ್ರಥಮ, 100 ಮೀ ಓಟ-ದ್ವಿತೀಯ, ಗುಂಡು ಎಸೆತ-ಪ್ರಥಮ ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದೆ.


ದಿಡಗ ಗ್ರಾಮದ ಹೊಯ್ಸಳ ಶಾಲೆಯು ಥ್ರೋ ಬಾಲ್-ಪ್ರಥಮ, ಖೋ ಖೋ- ಪ್ರಥಮ, 400 ಮೀಟರ್ ಪ್ರಥಮ, 200 ಮೀಟರ್-ತೃತೀಯ, 100 ಮೀಟರ್-ಪ್ರಥಮ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗೆ ಆಯ್ಕೆಯಾದ ಶಾಲೆ ಹಾಗೂ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಶಾಸಕ ಸಿ.ಎನ್.ಬಾಲಕೃಷ್ಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು.


ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಜ್ಞಾನಪ್ರಭಾ ಶಾಲೆಯ ಮುಖ್ಯಸ್ಥ ಎ.ಜಿ.ಪ್ರಭಾಕರ್, ಕಸಾಪ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್, ಸೊಸೈಟಿ ಅಧ್ಯಕ್ಷ ಬಾಬು, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಮಹದೇವ್, ಅನಿಲ್, ಚಲುವನಾರಾಯಣಸ್ವಾಮಿ, ರವೀಂದ್ರ, ಪಿಡಿಒ ಸತೀಶ್, ಎಸ್‌ಐ ಸುಪ್ರಿತ್, ಮುಖ್ಯ ಶಿಕ್ಷಕರಾದ ಬಿ.ಎಚ್.ನಂದೀಶ್, ಚಂದ್ರಕಲಾ, ಹೋಬಳಿ ವ್ಯಾಪ್ತಿಯ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.