ಜಿಲ್ಲೆ

ಹಿರಿಯೂರು ತಾಲೂಕಲ್ಲಿ ಮಳೆ ಕೊರತೆ, ಬಿತ್ತನೆ ವೈಫಲ್ಯ

ಚಿತ್ರದುರ್ಗ: ಹಿರಿಯೂರು ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನ ಜೂನ್, ಜುಲೈನಲ್ಲಿ ಶೇ.48ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಕೃಷಿ ಇಲಾಖೆ, ವಿಮಾ ಕಂಪನಿ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಒಟ್ಟು ಕೃಷಿ ಭೂಮಿ ಪೈಕಿ ಶೇ.14.66 ರಷ್ಟು ಮಾತ್ರ ಬಿತ್ತನೆಯಾಗಿದೆ. ಬೆಳೆ ವಿಮೆ ತುಂಬಿದ ರೈತರಿಗೆ ನಿಯಮಾನುಸಾರ ಶೇ.25ರಷ್ಟು ವಿಮಾ ಪರಿಹಾರಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ತಾಲೂಕಿನ 40,510 ಹೆಕ್ಟೇರ್ ಕೃಷಿಭೂಮಿ ಪೈಕಿ, 5,939 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆಗಸ್ಟ್‌ನಲ್ಲಾದ ಮಳೆಯಿಂದ ಬಿತ್ತನೆಗೆ ಏನು ಪ್ರಯೋಜನವಾಗಿಲ್ಲ.

ಹಿರಿಯೂರು ಕಸಬಾ ಹೋಬಳಿಯಲ್ಲಿ 9,045 ಹೆಕ್ಟೇರ್ ಕೃಷಿ ಭೂಮಿ ಪೈಕಿ 947 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಐಮಂಗಲ-9,385 ಹೆಕ್ಟೇರ್-1,748 ಹೆಕ್ಟೇರ್. ಜೆಜಿಹಳ್ಳಿ-9,965 ಹೆಕ್ಟೇರ್-1,313 ಹೆಕ್ಟೇರ್. ಧರ್ಮಪುರ-12,115 ಹೆಕ್ಟೇರ್ ಪೈಕಿ 2,468 ಹೆಕ್ಟೇರ್ ಪ್ರ ದೇಶದಲ್ಲಿ ಬಿತ್ತನೆಯಾಗಿದೆ.

ಹಿರಿಯೂರು ತಾಲೂಕಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 9,410 ರೈತರು ನೋಂದ ಣಿಯಾಗಿದ್ದು,ಅಂದಾಜು 1.62 ಕೋಟಿ ರೂ.ವಿಮಾ ಕಂತು ಪಾವತಿಸಿದ್ದಾರೆ. ಅಧಿಸೂಚನೆಯಂತೆ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡರೆ,ವಿಮಾ ಮೊತ್ತದ ಗರಿಷ್ಠ ಶೇ.25 ಪರಿಹಾರವನ್ನು ವಿಮಾ ಸಂಸ್ಥೆ ನೀಡಿ,ಮುಂದಿನ ಅವಧಿ ವಿಮೆಯನ್ನು ರದ್ದು ಪಡಿಸ ಬೇ ಕು,ನಷ್ಟ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಸೂಚಿಸಿರುವುದಾಗಿನ ತಿಳಿಸಿದರು.

ವಾಡಿಕೆ ಪ್ರಕಾರ ಹಿರಿಯೂರು ತಾಲೂಕಲ್ಲಿ ಜೂನ್‌ನಲ್ಲಿ 49 ಮಿ.ಮೀ ಮಳೆ ನಿರೀಕ್ಷೆ ಇತ್ತು,ಆದರೆ 17.5 ಮಿ.ಮೀ.ಆಗಿದೆ. ಜುಲೈ ನಲ್ಲಿ 53 ಮಿ.ಮೀ.ಮಳೆ ನಿರೀಕ್ಷೆ ಇತ್ತು,ಆದರೆ 30 ಮಿ.ಮೀ.ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾಹಿತಿ ನೀಡಿದರು. ತಾಲೂಕಿನ ಕಸಬಾ ಹಾಗೂ ಐಮಂಗಲ-ಶೇ.57,ಧರ್ಮಪುರ- ಶೇ.34 ಹಾಗೂ ಜೆಜಿಹಳ್ಳಿ ಹೋಬಳಿಯಲ್ಲಿ ಶೇ.63 ಮಳೆ ಕೊರತೆಯಾಗಿದೆ. ಒಟ್ಟಾರೆ ಹಿರಿಯೂರು ತಾಲೂಕಿನಲ್ಲಿ ಈ ವರ್ಷ ಜನವರಿಯಿಂದ ಜುಲೈವರೆಗೆ ಶೇ.23 ಮಳೆ ಕೊರತೆಯಾಗಿದೆ

ಜಿ.ಪಂ.ಉಪಕಾರ‌್ಯದರ್ಶಿ ಡಾ.ರಂಗನಾಥ,ಕೃಷಿ ವಿಜ್ಞಾನಿ ಓಂಕಾರಪ್ಪ,ದಿ ಓರಿಯಂಟಲ್ ಇನ್ಸೂರೆನ್ಸ್ ಕಂಪನಿ ವ್ಯವಸ್ಥಾಪಕಿ ಸುಧಿತಾ ಶಾ ಲಿನಿ,ಸಹಾಯಕ ವ್ಯವಸ್ಥಾಪಕಿ ಕರಪಗವಲ್ಲಿ,ಜಿಲ್ಲಾ ಶಾಖೆಯ ಅರುಣ್‌ಕುಮಾರ್,ಎಂ.ಆರ್.ಅಜಿತ್,ರೈತ ಮುಖಂಡರಾದ ಕೆ.ಟಿ.ತಿಪ್ಪೇಸ್ವಾ ಮಿ,ಹಂಪಯ್ಯನ ಮಾಳಗಿ ಧನಂಜಯ,ಬಸ್ತಿಹಳ್ಳಿ ಸುರೇಶ್‌ಬಾಬು,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,ಕೆ.ಸಿ.ಹೊರಕೇರಪ್ಪ,ಅಧಿಕಾರಿಗಳು ಇದ್ದರು.