ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ನಗರದ ಚಿಕ್ಕಪೇಟೆಯಲ್ಲಿರುವ ಮೈಲಾರಲಿಂಗೇಶ್ವರ ದೇಗುಲ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
300 ವರ್ಷಗಳ ಇತಿಹಾಸ ಸಾರುವ ದೇವಸ್ಥಾನ ಪ್ರಸಿದ್ಧ ಶ್ರದ್ಧಾ ಕೇಂದ್ರವಾಗಿದೆ. ಸ್ವಾಮಿಗೆ ಪ್ರತಿ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಮೈಲಾರದ ಮೂಲ ದೇವಸ್ಥಾನಕ್ಕೆ ಹೋಗಿ ಹರಕೆ ಸಲ್ಲಿಸಲು ಸಾಧ್ಯವಾಗದ ಭಕ್ತರು ಇಲ್ಲಿಗೆ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ.
ಮೂಲ ದೇಗುಲದ ರೀತಿಯಲ್ಲೇ ಹಿರಿಯೂರಿನ ದೇವಸ್ಥಾನದಲ್ಲಿ ಮಳೆ, ಬೆಳೆ, ಇಷ್ಟಾರ್ಥ ಸಿದ್ಧಿಗಾಗಿ ಹೇಳಿಕೆ ರೂಪದ ಕಾರ್ಣೀಕವನ್ನು ದೇವವಾಣಿ ಎಂದು ನಂಬುವ ಭಕ್ತರು, ಕಾರ್ಣೀಕ ನಿಜವಾಗುವುದೆಂಬ ನಂಬಿಕೆ ಈ ಭಾಗದ ಜನರಲ್ಲಿದೆ.
ವಿಶೇಷ ಪೂಜೆ: ಕಾರ್ತೀಕ ಮಾಸದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉಯ್ಯಲೋತ್ಸವ, ಕಲ್ಯಾಣೋತ್ಸವ. ನವರಾತ್ರಿಯ ವಿಜಯ ದಶಮಿಯ ಮರು ದಿನ ನಗರದ ಸಂತೆ ಮೈದಾನದಲ್ಲಿ ಅಂಬಿನೋತ್ಸವ ಧಾರ್ಮಿಕ ಕಾರ್ಯ ವೈಭವದಿಂದ ನೆರವೇರುತ್ತದೆ.
ದಸರಾ ಸಂದರ್ಭದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟದ ಕುದುರೆಯ ಮೂರ್ತಿ ಮೇಲೆ ಪ್ರತಿಷ್ಠಾಪಿಸಿ, ಅದನ್ನು ಬಿದಿರಿನಿಂದ ಸಿದ್ದಪಡಿಸಿದ ಅಡ್ಡೆ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಭಕ್ತರು ಉತ್ಸವ ಮೂರ್ತಿಯನ್ನು ತಮ್ಮ ಮನೆಗೆ ಆಹ್ವಾನಿಸಿ, ಕಾಯಿ, ಬಾಳೆಹಣ್ಣು, ಸಕ್ಕರೆ, ದ್ರಾಕ್ಷಿ, ಗೋಡಂಬಿ, ಜೇನು ತುಪ್ಪ ಸೇರಿಸಿ ಮಾಡಿದ ಪ್ರಸಾದವನ್ನು ದೋಣಿ ಸೇವೆ ಹೆಸರಲ್ಲಿ ಸಲ್ಲಿಸುವರು.
ಜಿರ್ಣೋದ್ಧಾರ: 1970ರ ದಶಕದಲ್ಲಿ ಪುರಾತನ ದೇಗುಲವನ್ನು ನೆಲಸಮಗೊಳಿಸಿ ನೂತನವಾಗಿ ನಿರ್ಮಿಸಲಾಗಿದೆ. ಗರ್ಭಗುಡಿ, ಶುಕನಾಶಿನಿ ಮುಖ ಮಂಟಪ, ದೇವಾಲಯದ ಸುತ್ತ ಪೌಳಿ, ದ್ವಾರದಲ್ಲಿ ಜಗಲಿ ಕಟ್ಟೆ ನಿರ್ಮಿಸಲಾಗಿದೆ. (ವರ್ತಕ ಮೈಲಾರ ಶ್ರೇಷ್ಠಿ ನೆರವಿನೊಂದಿಗೆ ದೇಗುಲ ಜೀರ್ಣೋದ್ಧಾರ ಮಾಡಲಾಗಿದೆ).
ದೂರದಿಂದ ಭಕ್ತರ ಆಗಮನ: ದಾವಣಗೆರೆ, ತುಮಕೂರು, ಮಧುಗಿರಿ, ಶಿರಾ, ಚಳ್ಳಕೆರೆ, ಪಾವಗಡ ಹಾಗೂ ಆಂಧ್ರದಿಂದ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ.
ಮೈನವಿರೇಳಿಸುವ ಸರಪಳಿ ಪವಾಡ
ದಸರಾ-ವಿಜಯದಶಮಿ ಮರು ದಿನ ಸ್ವಾಮಿಯ ಸರಪಳಿ ಪವಾಡ ನಡೆಯಲಿದೆ. ಸರಪಳಿಗೆ ಅಮಾವಾಸ್ಯೆ ಹಾಗೂ ದಸರಾ ಸಂದರ್ಭದಲ್ಲಿ ಬಲಿ ಪೂಜೆ ಸಲ್ಲಿಸುವ ವಾಡಿಕೆಯಿದೆ. ಸರಪಳಿ ಪವಾಡವನ್ನು ಪಟ್ಟಣದ ಐದು ಗೊರವಪ್ಪ ಕುಟುಂಬದವರೆಲ್ಲ ಮೂರು ಕಾಲ ನೇಮ ನಿಷ್ಠೆಯಿಂದ ಒಂದೊತ್ತು ಇದ್ದು ನೆರವೇರಿಸುವರು. ದೇವಸ್ಥಾನದ ಮುಖ್ಯದ್ವಾರದ ಬಳಿಯ ತ್ರಿಶೂಲ, ಢಮರುಗ ಚಿಹ್ನೆಯುಳ್ಳ ಕಲ್ಲುಕಂಬಕ್ಕೆ 15 ಅಡಿ ಉದ್ದದ ಪುರಾತನ ಸರಪಳಿ ಕಟ್ಟಿ ಉಪವಾಸ ಇರುವ ಗೊರವಯ್ಯ ಎಳೆಯುತ್ತಾರೆ. ಕಲ್ಲುಕಂಬದ ಬುಡಕ್ಕೆ ಸರಪಳಿ ತುಂಡಾದರೆ ಅಶುಭ ಹಾಗೂ ಅರ್ಧದಿಂದ ಮುಂದಕ್ಕೆ ತುಂಡಾದರೆ ಶುಭವಾಗಿದ್ದು, ಮಳೆ-ಬೆಳೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ತಲುಪುವುದು ಹೇಗೆ?
ಹಿರಿಯೂರಿನ ಹೃದಯ ಭಾಗದಲ್ಲಿ ದೇವಸ್ಥಾನವಿದೆ. ಪಕ್ಕದಲ್ಲಿ ಐತಿಹಾಸಿಕ ಶ್ರೀ ವೆಂಕಟರಮಣ ಸ್ವಾಮಿ, ರಾಘವೇಂದ್ರ ಸ್ವಾಮಿ ದೇವಸ್ಥಾನ ಇದೆ. ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 40 ಕಿಮೀ ದೂರದಲ್ಲಿ. ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ 4 ಹಿರಿಯೂರಿನಲ್ಲಿ ಹಾದು ಹೋಗಿದೆ. ಸಮೀಪದಲ್ಲಿ ವೇದಾವತಿ ನದಿ ಹರಿಯುತ್ತದೆ. ಸಾರಿಗೆ ವ್ಯವಸ್ಥೆಗೆ ಸಮಸ್ಯೆ ಇಲ್ಲ.
ಹಾಲುಮತ ಸಮುದಾಯದ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಯ ಪ್ರತೀಕವಾದ ಆರಾಧ್ಯ ದೈವ ಮೈಲಾರಲಿಂಗೇಶ್ವರ ಸ್ವಾಮಿ ಐತಿಹಾಸಿಕ ದೇಗುಲಕ್ಕೆ 300 ವರ್ಷಗಳ ಇತಿಹಾಸವಿದೆ. ನಂಬಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತದೆ.
ಹರ್ತಿಕೋಟೆ ಮಹಾಸ್ವಾಮಿ, ಮಾಜಿ ಅಧ್ಯಕ್ಷ, ತಾಲೂಕು ಕಸಾಪ