ಜಿಲ್ಲೆ

ಹಿರಿಯರಿಂದ ಸಮಾಜ ಬದಲಾವಣೆ ಸಾಧ್ಯ

ಬಳ್ಳಾರಿ : ಸಮಾಜದಲ್ಲಿ ಯುವಪೀಳಿಗೆಯನ್ನು ಮುನ್ನೆಡೆಸುವಲ್ಲಿ ಹಿರಿಯ ನಾಗರಿಕರ ಮಾರ್ಗದರ್ಶನವು ಅತ್ಯಂತ ಮಹತ್ತರವಾಗಿದ್ದು, ಹಿರಿಯ ನಾಗರಿಕರ ಅನುಭವಗಳಿಂದ ಮಾತ್ರ ಸಮಾಜ ಬದಲಾವಣೆಯು ಸಾಧ್ಯ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರು 60 ವರ್ಷ ತುಂಬಿದ ನಂತರ ಎಲ್ಲವೂ ಮುಗಿಯಿತು ಎನ್ನುವ ಗೋಜಿಗೆ ಹೋಗುತ್ತಾರೆ. ಬದಲಾಗಿ ಅಂದಿನಿಂದಲೇ ತಮ್ಮ ಅನುಭವ ಮತ್ತು ಮಾರ್ಗದರ್ಶನಗಳಿಂದ ನಿಜ ಜೀವನದ ಪಯಣ ಆರಂಭಗೊಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್ ಹೊಸಮನೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದು ಕಂಡುಬರುತ್ತಿದ್ದು, ವಿಷಾದನೀಯ ಸಂಗತಿಯಾಗಿದೆ. ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಅವರನ್ನು ಕಡೆಗಣಿಸುವಂತಿಲ್ಲ. ಹಿರಿಯ ನಾಗರಿಕರು ನೈತಿಕ ಮೌಲ್ಯಗಳನ್ನು ಮತ್ತು ಜೀವನದ ರೂಪುರೇಷೆಗಳನ್ನು ಇಂದಿನ ಪೀಳಿಗೆಯಲ್ಲಿ ಆಳವಾಗಿ ಬಿತ್ತುವ ಕೆಲಸವಾಗಬೇಕು ಎಂದರು.
ಎಡಿಸಿ ಮಹಮ್ಮದ ಎನ್. ಝುಬೇರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶತಾಯುಶಿಗಳಿಗೆ ಸನ್ಮಾನಿಸಲಾಯಿತು. ಬಳಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು.