ಯಾದಗಿರಿ: ಹಿರಿಯರು ತಮ್ಮ ಜೀವನದಲ್ಲಿ ನಡೆದ ಸಿಹಿ-ಕಹಿ ಅನುಭವಗಳನ್ನು ಯುವ ಜನತೆಗೆ ತಿಳಿಸಿ, ಕಿವಿಮಾತು ಹೇಳುತ್ತಾರೆ. ಹಿರಿಯ ಜೀವಿಗಳ ಮಾರ್ಗದರ್ಶನ ಈ ಸಮಾಜಕ್ಕೆ ಸದಾ ಅವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.
ನಗರದ ಕೀರೇಶ್ವರ ಮಠದ ಆವರಣದಲ್ಲಿ ಮಂಗಳವಾರ ನಿವೃತ್ತ ನೌಕರರ ಸಂಘದಿಂದ ಆಯೋಜಿಸಿದ್ದ ಹಿರಿಯ ನಾಗರಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯರನ್ನು ಯುವಕರು ಗೌರವದಿಂದ ಕಾಣುವುದನ್ನು ಕಲಿಯಬೇಕು. ವಯಸ್ಸಾಗಿದೆ ಎಂದು ನಿಷ್ಕಾಳಜಿ ವಹಿಸುವುದು ಸರಿಯಲ್ಲ. ಹಿರಿಯರಲ್ಲಿ ಮಾತ್ರ ಜೀವನಾಮೃತ ಸಿಗಲು ಸಾಧ್ಯ ಎಂದರು.
ಆರೋಗ್ಯಯುತ ಬದುಕಿನೊಂದಿಗೆ ಸೂಕ್ತ ಮಾರ್ಗದರ್ಶನ ನೀಡುವುದರಿಂದ ಸಮಾಜಕ್ಕೆ ಹೆಚ್ಚು ಲಾಭವಿದೆ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ಪಾತ್ರ ಹೆಚ್ಚು ಪ್ರಾಮುಖ್ಯವಾದುದು. ಹಿರಿಯರು ಸದಾ ಚಟುವಟಿಕೆಯಿಂದ ಇದ್ದು, ಸಮಾಜದ ವಿವಿಧ ಸ್ತರಗಳಾದ ಸಾಹಿತ್ಯ ಕ್ಷೇತ್ರ, ಬರವಣಿಗೆಯಲ್ಲಿ ತೊಡಗುವುದು, ಸ್ನೇಹಿತರೊಟ್ಟಿಗೆ ಇರುವುದು, ಸಂಘ-ಸಂಸ್ಥೆಗಳಲ್ಲಿ ಭಾಗಿಯಾಗಿ, ಸಮಾಜದ ಉದ್ಧಾರಕ್ಕಾಗಿ ಉತ್ತಮ ಆರೋಗ್ಯದೊಂದಿಗೆ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ 80 ವರ್ಷ ಮೇಲ್ಪಟ್ಟ ಹಿರಿಯ ಜೀವಿಗಳಾದ ಲಕ್ಷ್ಮೀಕಾಂತರಾವ ಪದಕಿ, ವೆಂಕೋಬರಾವ ಶಿರವಾಳಕರ್, ಸೈಯದ್ ಚಾಂದಪಾಷ್ ಇನಾಂದಾರ, ಸಿದ್ದಲಿಂಗಪ್ಪ ವಾಲಿ, ಶರಣಪ್ಪ ಅಲಬನೂರ, ಎಂ.ಜಿ.ತಿಳಗೂಳ, ಮಲ್ಲಿಕಾಜರ್ುನ ಹಿರೇಮಠ, ಮಲರಡ್ಡೆಪ್ಪ ಪಾಟೀಲ, ಮಹಾಂತಪ್ಪ ಜಾಗಟೆ, ಅಶ್ವತ್ಥ ನಾರಾಯಣ, ಮಲ್ಲಿಕಾಜರ್ುನ ಪೂಜಾರಿ, ಅಯ್ಯಪ್ಪ ವಾಘಾರನ್ನು ಸಂಘದಿಂದ ಸನ್ಮಾನಿಸಲಾಯಿತು.