ಜಿಲ್ಲೆ

ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ್ ಇನ್ನಿಲ್ಲ

ಬೀದರ್: ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ವಿಶ್ವನಾಥ ಪಾಟೀಲ್ (84) ಭಾನುವಾರ ಸಂಜೆ ನಗರದ ಸ್ವಗ್ರಹದಲ್ಲಿ ನಿಧನ ಹೊಂದಿದರು. ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಒಂದು ಕಾಲು ಮುರಿದಿತ್ತು. ಇದಾದ ನಂತರ ಪಾಶ್ವ ೯ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು.

ಔರಾದ್ ತಾಲೂಕಿನ ಹಕ್ಯಾಳ ಗ್ರಾಮದ ಪಾಟೀಲ್ ಇಲ್ಲಿಯ ಸರ್ವಿಸ್ ಸ್ಟ್ಯಾಂಡ್ ಎದುರಿನ (ಎಸ್ ಬಿಐ ಬ್ಯಾಂಕ್ ಹಿಂಭಾಗ) ತಮ್ಮ ನಿವಾಸದಲ್ಲಿ ಇರುತ್ತಿದ್ದರು. ಸೋಮವಾರ ಬೆಳಗ್ಗೆ 9ರಿಂದ 10.30 ರವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. 11.30ಕ್ಕೆ ನರಸಿಂಹ ಝರಣಿ ಹತ್ತಿರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ಮಹೇಶ ಪಾಟೀಲ್ ತಿಳಿಸಿದ್ದಾರೆ.

ದಮನ್ ಪಟೇಲ್ ಖ್ಯಾತಿ:ವಿಶ್ವನಾಥ ಪಾಟೀಲ್ ಅವರು ಹೈದರಾಬಾದ್ ಉಸ್ಮಾನಿಯಾ ವಿವಿಯಿಂದ ಕಾನೂನು ಪದವಿ ಪಡೆದಿದ್ದರು. ಸದಾ ಸಮಾಜಪರ ಚಿಂತನೆ ಮಾಡುತ್ತಿದ್ದರು. ಅನ್ಯಾಯದ ವಿರುದ್ಧ ಹೋರಾಟದ ಸ್ವಭಾವ. ಉತ್ತಮ ವಾಗ್ಮಿ ಮತ್ತು ಲೇಖಕರಾಗಿದ್ದರಿಂದ ಇದು ಇವರನ್ನು ಪತ್ರಿಕಾ ರಂಗಕ್ಕೆ ಎಳೆದು ತಂದಿತು. 1965ರಲ್ಲಿ ಬೀದರ್ ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿಯಾಗಿ ನೇಮಕಗೊಂಡರು. ನಂತರ ಕಲಬುರಗಿ, ವಿಜಯಪುರ ವಾರ್ತಾಧಿಕಾರಿ ಕೆಲಸ ಮಾಡಿ, ಎರಡೂ ಕಡೆ ಇಲಾಖೆ ಹೊಸ ಕಚೇರಿ ಸ್ಥಾಪಿಸಿದರು. 1969ರಲ್ಲಿ ಮತ್ತೆ ಬೀದರ್ ವಾರ್ತಾಧಿಕಾರಿಯಾಗಿ ಬಂದರು. ಒಂದು ವರ್ಷ ಸೇವೆ ಬಳಿಕ ಈ ಸ್ಥಾನಕ್ಕೆ ರಾಜೀನಾಮೆ ನೀಡಿ, 1970ರಲ್ಲಿ ರಾಜ್ಯದ ಮೊದಲ ಹಿಂದಿ ದಿನಪತ್ರಿಕೆ ದಮನ್' ಆರಂಭಿಸಿದರು. ಇಲ್ಲಿಂದ ಇವರ ಪತ್ರಿಕಾ ರಂಗದ ಹೆಜ್ಜೆಗುರುತಿನ ಯಾತ್ರೆ ಶುರುವಾಯಿತು. ದಮನ್ ಪತ್ರಿಕೆ ಮೂಲಕ ಪ್ರಖರ ವರದಿ, ಶ್ರೇಷ್ಠ ವಿಚಾರಗಳನ್ನು ಬರೆಯುವ ಮೂಲಕ ಬೀದರ್ ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದರು. ಇವರ ಹರಿತವಾದ ಲೇಖನಗಳು ಉತ್ತಮ ಸಮಾಜಕ್ಕೆ ಪ್ರೇರಣೆ ನೀಡಿದ್ದವು. 80ರ ದಶಕದಲ್ಲಿ ದಮನ್ ಪತ್ರಿಕೆಯಲ್ಲಿ ಬರುತ್ತಿದ್ದ ವರದಿಗಳು ಹವಾ ಎಬ್ಬಿಸಿದ್ದವು. ಇದು ಇವರಿಗೆದಮನ್ ಪಟೇಲ್'ಎಂದೇ ಹೆಸರು ತಂದುಕೊಟ್ಟಿತು. ಅನೇಕರಿಗೆ ವಿಶ್ವನಾಥ ಪಾಟೀಲ್ ಹೆಸರು ಹೊಸದು. ಆದರೆ ದಮನ್ ಪಟೇಲ್ ಮಾತ್ರ ಎಲ್ಲರಿಗೂ ಗೊತ್ತು. ಇದು ಅವರ ಪತ್ರಿಕಾ ಸೇವೆ, ಅದರಲ್ಲಿ ಬರೆಯುತ್ತಿದ್ದ ವಿಚಾರ ಎಂಥವು ಎಂಬುದಕ್ಕೆ ಸಾಕ್ಷಿ ಎನಿಸಿದೆ.

ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ್, ತೆಲುಗು ಭಾಷೆ ಮೇಲೆ ಪ್ರಭುತ್ವ ಹೊಂದಿದ್ದರು. ಹಿಂದಿ ಪತ್ರಿಕೆ ನಡೆಸುವ ಜತೆಗೆ ಒಂದೂವರೆ ದಶಕ `ದಿ ಹಿಂದೂ' ಆಂಗ್ಲ ಪತ್ರಿಕೆ ಜಿಲ್ಲಾ ವಿಶೇಷ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸಿದ್ದರು. ಪ್ರತಿ ಹಂತದಲ್ಲಿಯೂ ಅಭಿವೃದ್ಧಿ ಚಿಂತನೆಗೆ ಒತ್ತು ನೀಡುತ್ತಿದ್ದರು. ಅನೇಕ ಭ್ರಷ್ಟಾಚಾರ, ಅಕ್ರಮ ಪ್ರಕರಣ ಬಯಲಿಗೆ ತಂದ ಶ್ರೇಯ ಇವರಿಗೆ ಸಲ್ಲುತ್ತದೆ. ಇವರ ನಿಧನದಿಂದ ಗಡಿ ಜಿಲ್ಲೆಯು ಹಿರಿಯ ಪತ್ರಕರ್ತ ಜತೆಗೆ ಉತ್ತಮ ಸಾಮಾಜಿಕ ಚಿಂತಕನಿಗೂ ಕಳೆದುಕೊಂಡಿದೆ.
ಪಾಟೀಲ್ ಅವರು ಸತ್ಯ, ಪ್ರಮಾಣಿಕತೆ, ಸೇವಾ ನಿಷ್ಠತೆಗೆ ಮತ್ತೊಂದು ಹೆಸರಾಗಿದ್ದರು. ಅವರು ಯಾವುದಾದರೂ ಕಚೇರಿಗೆ ಭೇಟಿ ನೀಡುತ್ತಿದ್ದಾರೆಂದು ಗೊತ್ತಾದರೆ ಭ್ರಷ್ಟರಿಗೆ ನಡುಕ ಹುಟ್ಟುತ್ತಿತ್ತು. ರಾಜಕಾರಣಿಗಳು, ಜನಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸುವಾಗ ಇವರ ಪ್ರಶ್ನೆಗೆ ಉತ್ತರಿಸಲು ಸಾಕಷ್ಟು ತಯಾರಿ ಮಾಡಿಕೊಂಡು ಬರುತ್ತಿದ್ದರು. ಅನೇಕ ಸಲ ಇವರು ಪ್ರಶ್ನೆ ಕೇಳಿದರೆ ಸುದ್ದಿಗೋಷ್ಠಿಯೇ ಮೊಟಕು ಆಗಿದ್ದವು! ಇದು ಅವರ ವಿಚಾರಗಳ ಶಕ್ತಿಗೆ ಉದಾಹರಣೆ ಎನ್ನಬಹುದು.

ಪಾಟೀಲ್ ಜೀವನ ಆದರ್ಶ
ದಮನ್ ಪಟೇಲ್ ಅವರದ್ದು ಸಂಘರ್ಷಮಯ ಬದುಕು. ಅನ್ಯಾಯದ ವಿರುದ್ಧ ಸಿಡಿದೇಳುವಂಥ ಸ್ವಭಾವ ಅವರನ್ನು ಒಬ್ಬ ಕಡಕ್ ಪತ್ರಕರ್ತರನ್ನಾಗಿ ರೂಪಿಸಿತ್ತು. ತಮ್ಮ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡರೂ ಸತ್ಯದ ಪಥದಿಂದ ಯಾವತ್ತೂ ಹಿಂದೆ ಸರಿದವರಲ್ಲ. ವಿವಿಧ ಆರೋಪಗಳಿಗೆ ಸಿಲುಕಿದರೂ ತಲೆಕೆಡಿಸಿಕೊಂಡವರಲ್ಲ. ಕೆಲವರು ಕೊಲೆಗೆ ಯತ್ನ ನಡೆಸಿದರೂ ಹೆದರಿದವರಲ್ಲ. ವಾಮಮಾರ್ಗ ಹಿಡಿದವರೊಂದಿಗೆ ರಾಜಿ ಮಾಡಿಕೊಂಡವರಲ್ಲ. ಇಂದಿನ ಪತ್ರಕರ್ತರಿಗೆ, ಸಾಮಾಜಿಕ ಚಿಂತಕರಿಗೆ ಅವರ ಜೀವನ, ಸಾಧನೆಯು ಆದರ್ಶ ಹಾಗೂ ಮಾದರಿಯಾಗಿದೆ.