ಜಿಲ್ಲೆ

ಹಿರಿಯ ಪತ್ರಕರ್ತ ಆರ್.ಜಯಕುಮಾರ್ ನಿಧನಕ್ಕೆ ಹಾಸನದಲ್ಲಿ ಸಂತಾಪ ಸಭೆ

Hassan - Ramesh H R

ಹಾಸನ: ಇತ್ತೀಚಿಗೆ ನಿಧನರಾದ ಹಿರಿಯ ಪತ್ರಕರ್ತ ಆರ್.ಜಯಕುಮಾರ್ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಂತಾಪ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು,ಆರ್.ಜಯಕುಮಾರ್ ವಿಭಿನ್ನ ವರದಿಗಾರಿಕೆ ಜೊತೆಗೆ ಚಳುವಳಿಗೂ ಜೀವ ತುಂಬಿದ್ದರು. ಪತ್ರಿಕೋದ್ಯಮ ಚಳುವಳಿ ಜೊತೆಗೆ ಎರಡು ಕೃತಿಗಳನ್ನೂ ರಚನೆ ಮಾಡಿದ್ದಾರೆ. ಕೂಲಿ ಕಾರ್ಮಿಕರ ಮಗವಾಗಿ ಹುಟ್ಟಿ ಅವರು ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡಿದರು.ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಚಳುವಳಿಗಾರ ಆದರು. ವಿವಿಧ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅನೇಕ ವರದಿ ಮಾಡಿದ್ದರು ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ ಮಾತನಾಡಿ, ಹಾಸನದಲ್ಲಿ ಸಂಯುಕ್ತ ಕರ್ನಾಟಕ ವರದಿಗಾರರಾಗಿದ್ದ ಜಯಕುಮಾರ್, ಜನಪರ ಹಾಗೂ ಸಮಾಜಮುಖಿ ಚಿಂತನೆ ಮಾಡುತ್ತಿದ್ದರು. ಹೋರಾಟ, ಜಾಗೃತಿಗಾಗಿಯೇ ಜನಸ್ಪಂದನ ವೇದಿಕೆ ಕಟ್ಟಿದ್ದರು. ಇದರ ಮೂಲಕ ಹಲವು ಕಾರ್ಯಕ್ರಮ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ಮಾತನಾಡಿ, ಯಾರೇ ಆಗಲಿ ಕ್ರೀಯಾಶೀಲ ಕೆಲಸ ಮಾಡಿದರೆ, ಅದರ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಜಯಕುಮಾರ್ ಅವರ ಕೆಲಸದ ಶೈಲಿ ಕಾರಣ ಎಂದರು.
ಹಿರಿಯ ಪತ್ರಕರ್ತ ಎಚ್.ಎಸ್.ಪ್ರಭಾಕರ್, ಮಾಜಿ ಅಧ್ಯಕ್ಷರಾದ ಬಿ.ಆರ್.ಉದಯಕುಮಾರ್, ರವಿ ನಾಕಲಗೂಡು, ಹಿಂದೂ ಪ್ರಕಾಶ್ ಮೊದಲಾದವರು ಮಾತನಾಡಿ, ಹಾಸನದಲ್ಲಿ ಮನೆ ಮನೆ ಕವಿಗೋಷ್ಟಿ ಕಾರ್ಯಕ್ರಮ ಹುಟ್ಟು ಹಾಕಿದ್ದ ಜಯಕುಮಾರ್, ಅವರಿಗೆ ವಹಿಸಿದ ಟಾಸ್ಕನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಜಿಲ್ಲೆಯಲ್ಲಿ ಅವರು ತಮ್ಮದೇ ಛಾಪು ಉಳಿಸಿ ಹೋಗಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿಗಳಾದ ನಟರಾಜ್, ಕೆ.ಎಂ.ಹರೀಶ್ ಇತರರು ಇದ್ದರು.