ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಪದಾಧಿಕಾರಿಗಳು ಹಿರಿಯ ನಾಗರೀಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿದರು. 
ಜಿಲ್ಲೆ

ಹಿರಿಯ ನಾಗರಿಕರಿಗೆ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ

ಚಿಕ್ಕಮಗಳೂರು: ಹಿರಿಯ ನಾಗರೀಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಸ್ ನಂಜುAಡರಾವ್, ಈಗಾಗಲೇ ಸಾರಿಗೆ ಬಸ್ಸುಗಳಲ್ಲಿ ಶೇ.೨೫ ರಷ್ಟು ರಿಯಾಯಿತಿ ನೀಡುತ್ತಿದ್ದು, ಈ ಹಿಂದೆ ಶೇ.೫೦ರಷ್ಟು ರಿಯಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ವೃದ್ದಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷ ಈ ವೇತನಗಳಿಗೆ ನೀಡುತ್ತಿರುವ ವೇತನ ಬಹಳ ಕಡಿಮೆಯಾಗಿದೆ. ಎಲ್ಲ ರೀತಿಯ ಔಷಧಗಳ ಬೆಲೆ ಹೆಚ್ಚಾಗಿರುವುದರಿಂದ ಈಗ ನೀಡುತ್ತಿರುವ ವೇತನಕ್ಕೆ ೨ರಷ್ಟು ಮಾಸಿಕ ವೇತನ ಹೆಚ್ಚಿಸ ಬೇಕು ಎಂದು ಮನವಿ ಮಾಡಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗೆ ವೈದ್ಯರ ಸಹಿತ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಮತ್ತು ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹಿರಿಯ ನಾಗರೀಕರ ಕೆಲಸ ತುರ್ತಾಗಿ ನಿರ್ವಹಿಸಿಕೊಡಬೇಕು ಎಂದು ಆಗ್ರಹಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹಿರಿಯ ನಾಗರೀಕರಿಗೆ ಇರುವ ಮೀಸಲು ಸೀಟುಗಳನ್ನು ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಬ್ಯಾಂಕ್‌ಗಳಲ್ಲಿ ಹಿರಿಯ ನಾಗರೀಕರಿಗೆ ಶೌಚಗೃಹ ಕಲ್ಪಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲಿನಂತೆ ಹಿರಿಯ ನಾಗರೀಕರಿಗೆ ಎಪಿಎಲ್ ಹಾಗೂ ಬಿಪಿಎಲ್ ಸಾರ್ವಜನಿಕ ವಿತರಣೆ ಆಧ್ಯತೆ ಮೇರೆಗೆ ನೀಡುವುದರ ಜೊತೆಗೆ ಎಪಿಎಲ್ ಕಾರ್ಡ್ ಹೊಂದಿದ ಹಿರಿಯ ನಾಗರಿಕರಿಗೆ ನಿಲ್ಲಿಸಿರುವ ಪಡಿತರವನ್ನು ಪುನಃ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಹಿರಿಯ ನಾಗರೀಕರಿಗೆ ರೈಲ್ವೆಯಲ್ಲಿ ಶೇ. ೪೦ ಪುರುಷರಿಗೆ, ಶೇ.೫೦ರಷ್ಟು ಮಹಿಳೆಯರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಈ ರಿಯಾಯಿತಿಯನ್ನು ಕೊರೋನ ವೇಳೆಯಲ್ಲಿ ರದ್ದು ಪಡಿಸಿರುವುದರಿಂದ ಹಿರಿಯ ನಾಗರೀಕರಿಗೆ ತುಂಬಾ ತೊಂದರೆಯಾಗಿದೆ. ಹಿರಿಯ ನಾಗರೀಕರು ವಿನಾ ಕಾರಣ ಪ್ರಯಾಣ ಮಾಡುವುದಿಲ್ಲ ಎಂದು ತಿಳಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಾದ ಗೋಪಾಲಕೃಷ್ಣ, ಕೃಷ್ಣಮೂರ್ತಿ, ಸಿ.ಆರ್.ಶಿವಾನಂದ, ಸತ್ಯನಾರಾಯಣ, ಮುನೀರ್ ಅಹಮದ್, ಎಸ್.ರಾಮಚಂದ್ರ, ಎನ್.ಜಿ.ರಾಜಶೇಖರ್, ಎಸ್.ಕೆ.ಭಾಷಾ, ಗೋವಿಂದಪ್ಪ, ಆನಂದ್‌ರಾವ್ ಮತ್ತಿತರರಿದ್ದರು.