ಜಿಲ್ಲೆ

ಹಿರಿಯ ನಾಗರಿಕರಿಗೆ ಪ್ರೀತಿ ತೋರಿ

ಮೈಸೂರು: ಮಕ್ಕಳು ವೃದ್ಧ ಪಾಲಕರನ್ನು ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು

.
ಶ್ರೀ ವಾಸುದೇವ ಮಹಾರಾಜ ಫೌಂಡೇಷನ್ ವತಿಯಿಂದ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ವಾಸುದೇವ ಮಹಾರಾಜರ 16ನೇ ಆರಾಧನಾ ಮಹೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಆಧುನಿಕ ಯುಗದಲ್ಲಿ ಪಾಲಕರು ನಿರ್ಲಕ್ಷೃಕ್ಕೆ ಒಳಗಾಗುತ್ತಿದ್ದಾರೆ. ತಂದೆ-ತಾಯಿ ತಮ್ಮ ಮಕ್ಕಳನ್ನು ಹೆತ್ತು ಹೊತ್ತು, ಆರೈಕೆ, ಪೋಷಣೆ ಮಾಡಿ ವಿದ್ಯೆ ಕಲಿಸುತ್ತಾರೆ. ಅವರು ದೊಡ್ಡವರಾದ ಮೇಲೆ ಅದೇ ಪಾಲಕರನ್ನು ಅಸಡ್ಡೆ ಮಾಡುತ್ತಾರೆ. ಇದರಿಂದ ತಂದೆ-ತಾಯಿ ವೃದ್ಧಾಶ್ರಮ ಸೇರುವಂತಾಗಿದೆ. ಇಲ್ಲವೇ ದೂರ ಇಡುತ್ತಾರೆ. ಆಸ್ತಿಗಾಗಿ ಪಾಲಕರನ್ನೇ ಕೊಲೆ ಮಾಡುವ ಮಕ್ಕಳ ನಿದರ್ಶನವೂ ಸಿಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


ವೃದ್ಧ ಪಾಲಕರನ್ನು ಮಕ್ಕಳು ಕಾಳಜಿ ವಹಿಸಿ ನೋಡಿಕೊಳ್ಳಬೇಕು. ಅವರು ನೆಮ್ಮದಿ, ಪ್ರೀತಿಯಿಂದ ಸಂಧ್ಯಾಜೀವನ ಕಳೆಯಲು ಅವಕಾಶ ಕಲ್ಪಿಸಿಕೊಡಬೇಕು. ಸಮಾಜವೂ ಸಹ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದರು.

ವಿವಿಧ ಕ್ಷೇತ್ರದ ವ್ಯಕ್ತಿಗಳಾದ ಎಂ.ಮೋಹನ್(ದತ್ತ ಕ್ರಿಯಾಯೋಗ), ಸಾಂಬಮೂರ್ತಿ(ಗಾಯನ), ಚಂದನಗೌಡ( ರೈತ), ಅಂಶಿ ಪ್ರಸನ್ನಕುಮಾರ್(ಪತ್ರಿಕಾರಂಗ), ಮಂಜುಳಾ ಉಮೇಶ್(ಸಾಹಿತ್ಯ), ಎಂ.ಪಿ.ಪ್ರಭುಸ್ವಾಮಿ(ಸಮಾಜ ಸೇವೆ), ಜೀವಧಾರ ರಕ್ತಿನಿಧಿ ಕೇಂದ್ರ(ಸಂಸ್ಥೆ), ಸುಪ್ರೀತ್(ಸಿನಿಮಾ) ಅವರಿಗೆ ‘ಶ್ರೀ ವಾಸುದೇವ ಮಹಾರಾಜ ಸದ್ಭಾವನಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಡಾ.ಕೆ.ರಘುರಾಮ್ ವಾಜಪೇಯಿ, ಫೌಂಡೇಷನ್‌ನ ಎಂ.ವಿ.ನಾಗೇಂದ್ರಬಾಬು, ಎನ್.ಅನಂತ್ ಇದ್ದರು.