ಜಿಲ್ಲೆ

ಹಿರಿಯ ನಾಗರಿಕರಿಗೆ 3 ಸಾವಿರ ರೂ.ಪಿಂಚಣಿ ನೀಡಿ

ಮೈಸೂರು: ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಮಾಸಿಕ ಕನಿಷ್ಠ 3 ಸಾವಿರ ರೂ.ಪಿಂಚಣಿ ನೀಡಬೇಕು ಎಂದು ಪಿಂಚಣಿದಾರರ ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.


ಪಿಂಚಣಿದಾರರ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಎನ್.ಕೆ.ಬಾಲಾಜಿರಾವ್ ನಿರ್ಣಯಗಳನ್ನು ಮಂಡಿಸಿದರು.


ಎನ್‌ಪಿಎಸ್ ಬದಲಿಗೆ ಹಳೇ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಬೇಕು. ಜತೆಗೆ, ಎಲ್ಲ ಪಿಂಚಣಿ ಯೋಜನೆಗಳ ಮೊತ್ತ ಏರಿಸಬೇಕು ಎಂದು ನಿರ್ಣಯಿಸಲಾಯಿತು. ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.


ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ. ಜಯರಾಮು ಮಾತನಾಡಿ, ದೇಶದಲ್ಲಿ ಅಸಂಘಟಿತ ವಲಯದ 10 ಕೋಟಿಗೂ ಅಧಿಕ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿದ್ದು, ಈ ಕುರಿತು ಹೋರಾಟವನ್ನು ತೀವ್ರಗೊಳಿಸಬೇಕಿದೆ ಎಂದರು.
ದೇಶದಲ್ಲಿರುವ 14 ಕೋಟಿ ಕಾರ್ಮಿಕರ ಪೈಕಿ 10 ಕೋಟಿ ಜನರಿಗೆ ಪಿಂಚಣಿ ಸೌಲಭ್ಯ ಇಲ್ಲ. ಸರ್ಕಾರ ಕನಿಷ್ಠ 21 ಸಾವಿರ ಪಿಂಚಣಿ ಘೋಷಿಸಿದ್ದು, 2014ರಿಂದ ಈವರೆಗೆ ಅದರ ಪರಿಷ್ಕರಣೆ ಆಗಿಲ್ಲ ಎಂದು ಕಿಡಿಕಾರಿದರು .


ಕಾರ್ಮಿಕ ಮುಖಂಡ ಶ್ರೀಧರ್ ಮಾತನಾಡಿ, ಎನ್‌ಪಿಎಸ್ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಆದರೆ, ಕಾರ್ಮಿಕ ಒಕ್ಕೂಟಗಳ ಹೋರಾಟ ದಮನ ಮಾಡಲು ಆಗಲ್ಲ ಎಂದರು.


ಸಂಘದ ಸಂಚಾಲಕ ಸಿ.ಆರ್.ಕೃಷ್ಣಮೂರ್ತಿ ಮಾತನಾಡಿ, ಹಿರಿಯ ನಾಗರಿಕರು ಗೌರವ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುವ ಸಮಾಜ ಆರೋಗ್ಯಕರ ಸಮಾಜ ಎನಿಸಿಕೊಳ್ಳುತ್ತದೆ. ಪಿಂಚಣಿ ನೀಡುವುದು ಸಮಾಜದ ಮತ್ತು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ. ಆದ್ದರಿಂದ ಪಿಂಚಣಿ ಭಿಕ್ಷೆಯಲ್ಲ, ಹಿರಿಯ ನಾಗರಿಕರ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು.


ರಾಷ್ಟ್ರೀಯ ಜನಸಂಖ್ಯಾ ಆಯೋಗದ 2020ರ ವರದಿಯಂತೆ ದೇಶದಲ್ಲಿರುವ ಹಿರಿಯ ನಾಗರಿಕರ ಸಂಖ್ಯೆ ಸುಮಾರು 14 ಕೋಟಿ ಇದೆ. ಅವರಲ್ಲಿನ 10 ಕೋಟಿ ಜನರಿಗೆ ಯಾವುದೇ ಪಿಂಚಣಿ ಅಥವಾ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಹೀಗಾಗಿ, ಅವರು ಅಸಹಾಯಕ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಅಮೆರಿಕಾ, ಆಸ್ಟ್ರೇಲಿಯಾ, ಯೂರೋಪ್ ದೇಶಗಳ ರೀತಿಯಲ್ಲಿ ಸರ್ಕಾರ ಸಾರ್ವತ್ರಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮಾಕಾಂತ್, ಸಂಘದ ಪದಾಧಿಕಾರಿಗಳಾದ ಶ್ರೀಕಾಂತ್, ನರಸಿಂಹಮೂರ್ತಿ, ಗೋವಿಂದರಾಜು, ಬಿ.ಆರ್.ಉಮಾಕಾಂತ್, ಪಿ.ಎಂ.ಪರಮೇಶ್ವರಯ್ಯ, ಪ್ರಕಾಶ, ನಿಂಗೇಗೌಡ ಇದ್ದರು.