ಜಿಲ್ಲೆ

ಹಿರಿಯ ನಾಗರಿಕರ ರಕ್ಷಣೆಗೆ ಇದೆ ಕಾನೂನಿನ ಬಲ

ಚಿತ್ರದುರ್ಗ: ಹಿರಿಯ ನಾಗರಿಕರ ಪಾಲನೆ, ಪೋಷಣೆ ಮತ್ತು ಸಂರಕ್ಷಣಾ ಕಾಯ್ದೆ-2007 ಜಾರಿ ಮೂಲಕ ಹಿರಿಯರ ರಕ್ಷಣೆಗೆ ಕಾನೂನಿನ ಬಲ ನೀ ಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರು-ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಾಲಭವನದದಲ್ಲಿ ಶುಕ್ರವಾರ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಏರ್ಪಡಿಸಿದ್ದ ಕಾನೂನು ನೆರವು ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರ ರಕ್ಷಣೆ ಹೊಣೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೇಲಿದೆ. ಹಿರಿಯ ನಾಗರಿಕ ರಕ್ಷಣೆ ಕಾಯ್ದೆಯಡಿ ಉಪ ವಿಭಾಗಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಆಸ್ತಿ ರಕ್ಷಣೆ ಜತೆಗೆ ಮಕ್ಕಳಿಂದ ಜೀವನಾಂಶ ಪಡೆಯಲು ಕಾಯ್ದೆಯಲ್ಲಿ ಹಿರಿಯರಿಗೆ ಅವಕಾಶ ನೀಡಲಾಗಿದೆ. ನಾನು ನ್ಯಾಯಾಧೀಶನಾಗಿ ಸೇವೆ ಆರಂಭಿಸಿದಾಗಿನಿಂದಲೂ ಈವರೆಗೆ ಗಮನಿಸಿದ ಹಾಗೆ, ಪಾಲಕರು ಆಸ್ತಿಗಾಗಿ ಮಕ್ಕಳ ಮೇಲೆ ಕೇಸು ದಾಖಲಿಸಿಲ್ಲ ಎಂದರು.
ಮಕ್ಕಳೇ ತಂದೆ-ತಾಯಿ ಮೇಲೆ ಕೇಸು ದಾಖಲಿಸಿರುವುದು ವಿಪರ್ಯಾಸದ ಸಂಗತಿ. ಅಂಗವಿಕಲರು ತಮ್ಮ ನ್ಯೂನತೆಗಳ ಬಗ್ಗೆ ಚಿಂತೆ ಮಾಡದೆ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು.ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ವೃದ್ಧಾಪ್ಯ ಎಂಬುದು ಮಾನ ವನ ಅವಿಭಾಜ್ಯ ಅಂಗ. ಮಾನಸಿಕವಾಗಿ ಮೊದಲೇ ಸಿದ್ಧವಾಗಿದ್ದರೆ ವೃದ್ಧಾಪ್ಯ ಕಷ್ಟಕರವೆನಿಸದು. ವಯಸ್ಸಾದಂತೆ ಅನಾರೋಗ್ಯದ ಸಮಸ್ಯೆ ಜತೆಗೆ ದೈಹಿಕ ಹಾಗೂ ಮಾನಸಿಕ ಅನಾರೋಗ್ಯ ಹೆಚ್ಚಾಗಿರುತ್ತದೆ. ಇದನ್ನು ಧೈರ್ಯದಿಂದ ಎದುರಿಸಲು ಮುಂಚಿತವಾಗಿ ಯೋಜನೆ ರೂಪಿಸಿಕೊಂಡರೆ ಸುಖಮಯ ಜೀವನ ಸಾಧ್ಯ. ಯಾವುದೇ ಕಾರಣಕ್ಕೂ ಹಿರಿಯ ನಾಗರಿಕರನ್ನು ತಾತ್ಸಾರ ಮನೋಭಾವದಿಂದ ಕಾಣಬಾರದೆಂದು ಸಲಹೆ ನೀಡಿದರು.
ಕಾನೂನು ನೆರವು ಅಭಿರಕ್ಷಕ ಎಂ.ಮೂರ್ತಿ ಹಾಗೂ ಫೋರ್ಥ್ ವೇವ್ ಫೌಂಡೇಷನ್‌ನ ರಿಯಾಜ್‌ಅಹ್ಮದ್ ಉಪನ್ಯಾಸ ನೀಡಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಹಿರಿಯ ನಾಗರಿಕರ ಕಲ್ಯಾಣ ಸಂಘದ ಅಧ್ಯಕ್ಷ ರಂಗಪ್ಪರೆಡ್ಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ, ವಕೀಲ ಬಸವರಾಜು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸೋಮಶೇಖರ್ ಮತ್ತಿತರರು ಇದ್ದರು.
==
ಕೋಟ್
ಹಿರಿಯ ನಾಗರಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವು ಕಾರ‌್ಯಕ್ರಮ ರೂಪಿಸಿದೆ. ಹಿರಿಯ ನಾಗರಿಕರನ್ನು ಪ್ರೀತಿ, ವಿಶ್ವಾಸ, ಗೌರವದಿಂದ ನಡೆಸಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಇರಬೇಕು. ಸರ್ಕಾರಿ ಕಚೇರಿಗೆ ಆಗಮಿಸುವ ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಸಮಸ್ಯೆಗಳ ತ್ವರಿ ತ ಪರಿಹಾರಕ್ಕೆ ಕ್ರಮವಹಿಸಲಾಗುವುದು.
ಎಸ್.ಜೆ.ಸೋಮಶೇಖರ್,ಸಿಇಒ,ಜಿಪಂ,ಚಿತ್ರದುರ್ಗ.