ಚಿತ್ರದುರ್ಗ: ಹಿರಿಯ ನಾಗರಿಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ಅವರನ್ನು ಗೌರವಿಸಬೇಕು. ಅವರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳ ನ್ನು ಕಲ್ಪಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಾಜ್ಯ ನಿವೃತ್ತ ನೌಕರರ ಜಿಲ್ಲಾ ಸಂಘದ ಆಶ್ರಯದಲ್ಲಿ ನಗರದ ಹೊಂಬೆಳಕು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಬುಧವಾರ ಹಿರಿಯ ನಾಗರಿಕರ ಕಾನೂನು ಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಯಾರೂ ಸಹ ಹಿರಿಯ ನಾಗರಿಕರನ್ನು ನಿರ್ಲಕ್ಷಿಸಬಾರದು. ಅವರ ಮಾರ್ಗದರ್ಶನವಿಲ್ಲದೆ ಈಚಿನ ದಿನಗಳಲ್ಲಿ ವೈವಾಹಿಕ, ಆಸ್ತಿ ವಿವಾ ದ ಪ್ರಕರಣಗಳು ಹೆಚ್ಚುತ್ತಿವೆ. ಹಿರಿಯರ ಮಾರ್ಗದರ್ಶನ ನಮ್ಮ ನಡತೆಗಳನ್ನು ತಿದ್ದಿಕೊಳ್ಳಲು ನೆರವಾಗಲಿದೆ. ದೇವಾಲಯದಲ್ಲಿರುವ ದೇ ವರಂತೆ ಮನೆಯಲ್ಲಿರುವ ಹಿರಿಯರು ಕೂಡ ಪೂಜ್ಯನೀಯ. ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸಲಹಾ ಕೇಂದ್ರ ಉದ್ಘಾಟಿಸಲಾಗಿ ದೆ. ಹಿರಿಯರು ಇದರ ಸದುಪಯೋಗ ಪಡೆಯಬೇಕು ಎಂದರು.
ಎಸಿ ಮೆಹಬೂಬ್ ಜೀಲಾನಿ ಖುರೇಷಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ 35 ಪ್ರಕರಣಗಳನ್ನು ಗುರುತಿಸಿ, 19 ನ್ನು ವಿಲೇವಾರಿ ಮಾಡಲಾಗಿದೆ. 6 ಪ್ರಕರಣಗಳಲ್ಲಿ ಹಿರಿಯ ನಾಗರಿಕರ ಆಸ್ತಿ ಮರು ನೋಂದಣಿ ಮಾಡಿಸಲಾಗಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯ ಒದಗಿಸಿದೆ. ಜತೆಗೆ ಅವರಿಗಾಗಿಯೇ ಕಾನೂನು ಭದ್ರತೆ ಒದಗಿಸಿದೆ ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಹಿರಿಯರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ, ಸಹಾಯವಾಣಿ ಕೇಂದ್ರ ಕಾರ‌್ಯ ನಿರ್ವಹಿಸಲಿದೆ. ಉಚಿತ ಕಾನೂನು ಹಾಗೂ ಆಪ್ತ ಸಲಹೆಗಳನ್ನು ನೀಡಲು ಹಾಗೂ ಸಮಸ್ಯೆಗಳ ತುರ್ತು ಸ್ಪಂದನೆಗೆ ಕಾನೂನು ಸಲಹೆ ಗಾರರನ್ನು ನಿಯೋಜಿಸಲಾಗಿದ್ದು, ಪ್ರತಿ ಗುರುವಾರ ಕಾನೂನು ಸಲಹೆಗಳನ್ನು ನೀಡಲಾಗುವುದು ಎಂದರು. ಇದೇ ವೇಳೆ ಅವರು ನಶಾಮುಕ್ತ ಭಾರತ ಅಭಿಯಾನ ಯೋಜನೆಯಡಿ ಮಾದಕ ವಸ್ತು ಸೇವನೆ ಮಾಡದೇ ಇರುವುದಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್, ತಹಸೀಲ್ದಾರ್ ಗೋವಿಂದರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್.ವಿಜಯ್ಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ಕುಮಾರ್, ಕಾರ‌್ಯದರ್ಶಿ ಆರ್.ಗಂಗಾಧರ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್, ಹಿರಿಯ ನಾಗರಿಕರ ಜಿಲ್ಲಾ ಸಂಘ ಅಧ್ಯಕ್ಷ ರಂಗಪ್ಪ ರೆಡ್ಡಿ, ಬಸವೇಶ್ವರ ವಿದ್ಯಾಸಂಸ್ಥೆ ಕಾರ‌್ಯದರ್ಶಿ ಕೆ.ಶಂಕರಪ್ಪ ಇತರರು ಇದ್ದರು.