ಜಿಲ್ಲೆ

ಹಿರಿಯ ಅಧಿಕಾರಿಗಳ ಸಾಧನೆ ಗ್ರಂಥ ಮಾರ್ಗದರ್ಶಕ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಬಡ ಕುಟುಂಬದಿಂದ ಕಷ್ಟಪಟ್ಟು ಮೇಲೆ ಬಂದು, ಉನ್ನತ ಅಧಿಕಾರದ ಚುಕ್ಕಾಣಿ ಹಿಡಿದಂತಹ ಎಸ್​.ಆರ್​.ಉಮಾಶಂಕರ್​ ಅವರಂತಹ ಹಲವು ದಕ್ಷ, ಪ್ರಾಮಾಣಿಕ ಅಧಿಕಾರಿಗಳ ಅನುಭವಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಕುವೆಂಪು ಕಲಾಕ್ಷೇತ್ರದಲ್ಲಿ(ರಾಜ್ಯ ಒಕ್ಕಲಿಗರ ಸಂ)ಭಾನುವಾರ ಹಮ್ಮಿಕೊಂಡಿದ್ದ "ಎಸ್​.ಆರ್​.ಉಮಾಶಂಕರ್​&60' ಅಭಿನಂದನೆ ಹಾಗೂ ಗೌರವ ಗ್ರಂಥ "ಸಾಧಕ ಶಂಕರ' ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಐಎಎಸ್​ ಅಧಿಕಾರಿಗಳ ಅನುಭವ ವಿಭಿನ್ನವಾಗಿರುತ್ತದೆ. ಇದೇ ರೀತಿ ಎಲ್ಲ ಅಧಿಕಾರಿಗಳ ಸಾಧನೆಯ ಹಾದಿಯನ್ನು ದಾಖಲಿಸುವುದು ಉತ್ತಮ ಕಾರ್ಯ ಎಂದರು. ಸಂಸದ ಡಾ.ಸಿ.ಎನ್​.ಮಂಜುನಾಥ್​ ಮಾತನಾಡಿ, ಅಧಿಕಾರ, ಹಣ ಇದ್ದಾಗ ಬದಲಾಗದೆ ಇರುವವರು ಒಳ್ಳೆಯ ವ್ಯಕ್ತಿಗಳು. ಆ ನಿಟ್ಟಿನಲ್ಲಿ ಉಮಾಶಂಕರ್​ ಅವರದ್ದು, ಸರಳ ಹಾಗೂ ಸಾತ್ವಿಕತೆಯ ವ್ಯಕ್ತಿತ್ವ. ಅಧಿಕಾರಿಗಳು ಸದಾ ಸಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬೇಕು ಎಂದರು. ಜ್ಞಾನಪೀಠ ಪ್ರಶಸ್ತಿ ಪುರಸತ ನಾಡೋಜ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಸಾಮಾನ್ಯವಾಗಿ ಅಧಿಕಾರಿಗಳ ಬಗ್ಗೆ ಹೊಗಳಿಕೆಯ ಪುಸ್ತಕಗಳು ಬರುವುದಿಲ್ಲ. ಇದು ಅಪರೂಪದ್ದು. ಉಮಾಶಂಕರ್​ ಅಂತೆಯೇ ಜನರಿಗೆ ಅನುಕೂಲವಾಗುವ ಕೆಲಸ ಮಾಡಿದರೆ ಖಂಡಿತಾ ಗುರುತಿಸುತ್ತಾರೆ ಎಂದು ತಿಳಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಐಎಎಸ್​ ಅಧಿಕಾರಿ ಎಸ್​.ಆರ್​.ಉಮಾಶಂಕರ್​, ಅಧಿಕಾರ ಜಾಸ್ತಿಯಾದಷ್ಟು ನಾವು ದೊಡ್ಡ ಸೇವಕರಾಗುತ್ತೇವೆ. ಹೆಚ್ಚಿನ ಜವಾಬ್ದಾರಿ ಬರುತ್ತದೆ ಹೆಚ್ಚು ಸೇವೆ ಮಾಡುತ್ತೇವೆ. ಇದು ನಾನು ಅನುಸರಿಸಿಕೊಂಡು ಬಂದಂಥ ಸಿದ್ಧಾಂತ. ಚಿಕ್ಕಂದಿನಿಂದಲೇ "ಲೋಕಸೇವಾ' ಕುರಿತು ಸಾಕಷ್ಟು ಜ್ಞಾನ ನನ್ನಲ್ಲಿ ಇತ್ತು. ಮನೆಯಲ್ಲೂ ನಾನು ಐಎಎಸ್​ ಆಗಬೇಕೆಂಬ ಬೇಡಿಕೆಯೂ ಇತ್ತು. ತಳಮಟ್ಟದಿಂದಲೇ ಅಧಿಕಾರಕ್ಕೆ ಏರಿದ ಕಾರಣ ಜನರ ಬೇಡಿಕೆ, ಅವಶ್ಯಕತೆಗಳ ಬಗ್ಗೆ ಸ್ಪಷ್ಟ ಚಿತ್ರಣ ನನ್ನಲ್ಲಿ ಇತ್ತು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್​ ಅಧಿಕಾರಿ ಎಸ್​.ಆರ್​.ಉಮಾಶಂಕರ್​ ಹಾಗೂ ಪತ್ನಿ ತ್ರಿವೇಣಿ ಉಮಾಶಂಕರ್​ ಅವರನ್ನು ಗಣ್ಯರು ಸನ್ಮಾನಿಸಿದರು. ಉಮಾಶಂಕರ್​ ಅವರ ಗೌರವ ಗ್ರಂಥ "ಸಾಧಕ ಶಂಕರ' ಕೃತಿಯನ್ನು ನಾಡೋಜ ಡಾ.ಚಂದ್ರಶೇಖರ ಕಂಬಾರ ಲೋಕಾರ್ಪಣೆಗೊಳಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ದರ್ಶನ್​ ಪುಟ್ಟಣ್ಣಯ್ಯ, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್​ ಗಿರಿನಾಥ್​, ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ, ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಂ ರಾಯಪುರ ಮತ್ತಿತರರು ಇದ್ದರು.

> ಎಸ್​.ಆರ್​. ಉಮಾಶಂಕರ್​, ನಿವೃತ್ತ ಐಎಎಸ್​ ಅಧಿಕಾರಿಯಾವುದೇ ಹುದ್ದೆಯು ಸಣ್ಣದಲ್ಲ, ದೊಡ್ಡದೂ ಅಲ್ಲ. ನನಗೂ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಹಂಬಲ ಇತ್ತು. ಆದರೆ, ನೀಡಿದ ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಮುಖ್ಯವಾಗುತ್ತದೆ. ಯಾವದೇ ಹುದ್ದೆಯಾದರೂ ಜನರ ಕೆಲಸ ಮಾಡಲು ವಿಪುಲ ಅವಕಾಶಗಳಿರುತ್ತದೆ. ಯಾವುದಾದರು ಕಾನೂನು ಜನರಿಗೆ ಪ್ರತಿಕೂಲವಾಗಿದ್ದರೆ, ಅದರ ಹೆಸರು ಹೇಳಿ ಜನರ ಕೆಲಸ ತಪ್ಪಿಸಬಾರದು. ಬದಲಾಗಿ ಕಾನೂನನ್ನು ತಿದ್ದಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಆದ್ದರಿಂದ ದೇಶಕ್ಕೆ ತಿದ್ದುಪಡಿ ಸಚಿವಾಲಯದ ಅವಶ್ಯಕತೆ ಇದೆ. > ಡಾ.ಸಿ.ಎನ್​.ಮಂಜುನಾಥ್​ ಸಂಸದ