ಜಿಲ್ಲೆ

ಹಿಮ್ಸ್ ಪ್ರಭಾರಿ ನಿರ್ದೇಶಕರಾಗಿ ಡಾ.ಬಿ. ರಾಜಣ್ಣ ನೇಮಕ

ಹಾಸನ: ಕಳೆದ 6 ತಿಂಗಳಿನಿಂದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಭಾರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಎಸ್.ವಿ.ಸಂತೋಷ್ ಅವರನ್ನು ಸರ್ಕಾರ ಬದಲಾವಣೆ ಮಾಡಿದ್ದು, ಅವರ ಜಾಗಕ್ಕೆ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಬಿ.ರಾಜಣ್ಣ ಅವನ್ನು ಶುಕ್ರವಾರ ನೇಮಕ ಮಾಡಿ ಆದೇಶ ಹೊಡಿಸಿದೆ. ಅದರಂತೆ ಶುಕ್ರವಾರ ಡಾ.ಬಿ. ರಾಜಣ್ಣ ಅವರಿಗೆ ಡಾ.ಎಚ್.ವಿ. ಸಂತೋಷ್ ಅವರು ಅಧಿಕಾರ ಹಸ್ತಾಂತರ ಮಾಡಿದರು.
ಡಾ.ಎಸ್.ವಿ.ಸಂತೋಷ್ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇವರನ್ನು ಹಿಮ್ಸ್ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿ ಆ ಜಾಗಕ್ಕೆ ಡಾ.ರಾಜಣ್ಣ ನೇಮಕ ಮಾಡಿ, ಡಾ.ಸಂತೋಷ ಅವರನ್ನು ಮನೋವೈದ್ಯಶಾಸತ್ರ ವಿಭಾಗದ ಪ್ರಾಧ್ಯಾಪಕಾಗಿ ಮುಂದುವೆರೆಯುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.
ಡಾ. ಸಂತೋಷ್ ಅವರ ಮೇಲಿನ ಆರೋಪದ ತನಿಖೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವೆಂಕಟರಾಘವ ಎಂಬುವವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದರಲ್ಲಿ ಸರ್ಕಾರದ ಅನುಮತಿ ಪಡೆಯದೆ ಅಕ್ರಮವಾಗಿ ವೈದ್ಯರನ್ನು ನೇಮಕ ಮಾಡಿಕೊಂಡಿರುವುದು ಮತ್ತು ತನ್ನ ಪತ್ನಿಯನ್ನು ಹಿಮ್ಸ್ ಆಸ್ಪತ್ರೆಗೆ ನೇಮಕ ಮಾಡಿರುವ ಬಗ್ಗೆ ಸಾಕ್ಷಿ ಸಮೇತ ರುಜುವಾಗಿರುವುದರಿಂದ ಇವರನ್ನು ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಲಾಗಿದೆ.
ಈ ಹಿಂದೆ ಡಾ.ಬಿ.ಸಿ.ರವಿಕುಮಾರ್ ಅವರಿಂದ ತೆರವಾದ ಹಿಮ್ಸ್ ನಿರ್ದೇಶಕ ಸ್ಥಾನಕ್ಕೆ ಹಿರಿತನ ಆಧಾದ ಮೇಲೆ ನೇಮಕ ಮಾಡದೆ, ನಿಯಮಗಳನ್ನು ಗಾಳಿಗೆ ತೂರಿ ಕಿರಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾಕ್ಕೆ ಸಾಕಷ್ಟು ದೂರುಗಳು ಸಲ್ಲಿಕೆ ಆಗಿದ್ದವು. ಈ ಸಂಬಂಧವೂ ಕೂಡ ತನಿಖೆ ನಡೆಸಿ ಡಾ. ಸಂತೋಷ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಹಿರಿತನದ ಆಧಾರದ ಮೇಲೆ ಶಸತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಬಿ. ರಾಜಣ್ಣ ಅವನ್ನು ನೇಮಕ ಮಾಡಿದೆ.

ಕೆಲಸ ತೃಪ್ತಿ ತಂದಿದೆ ಎಂದ ಡಾ. ಸಂತೋಷ್:
ನಾನು ಕಳೆದ 6 ತಿಂಗಳಿನಿಂದ ಹಿಮ್ಸ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ತೃಪ್ತಿ ಇದ್ದು, ಸರ್ಕಾರದ ಆದೇಶಕ್ಕೆ ತಲೆ ಬಾಗುತ್ತೇನೆ ಎಂದು ಡಾ.ಎಸ್.ವಿ.ಸಂತೋಷ್ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸರ್ಕಾರ ನನ್ನನ್ನು ನೇಮಕ ಮಾಡಿದ ಸಂದರ್ಭದಲ್ಲಿ ನರ್ಸ್ ವಸತಿ ಗೃಹಗಳ ಕಟ್ಟಡ ಉದ್ಘಾಟನೆ ಮತ್ತು ಮಕ್ಕಳ ಆಸ್ಪತ್ರೆಗೆ ಚಾಲನೆ ನೀಡಿದ್ದೇನೆ. ಇದರ ಜತೆಗೆ ಹಲವು ಉತ್ತಮ ಕೆಲಸಗಳನ್ನು ಸಂಸ್ಥೆಯ ಎಲ್ಲರ ಸಹಕಾರದಿಂದ ಮಾಡಿದ್ದೇನೆ. ಇದೀಗ ಸರ್ಕಾರ ಡಾ.ಬಿ.ರಾಜಣ್ಣ ಅವನ್ನು ನೇಮಕ ಮಾಡಿದೆ. ಅವರು ಈ ಸಂಸ್ಥೆಯನ್ನು ಉತ್ತಮವಾಗಿ ನಡೆಸಲಿ ಎಂದು ಹೇಳಿದರು.

ಡಾ. ಸಂತೋಷ್‌ಗೆ ನೋಟಿಸ್:
ಡಾ. ಎಸ್.ವಿ.ಸಂತೋಷ್ ಅವರ ಅಧಿಕಾರದ ಅವಧಿಯಲ್ಲಿ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರು ಶುಕ್ರವಾರ ನೋಟಿಸ್ ನೀಡಿದ್ದು, ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಉತ್ತರ ನೀಡುವಂತೆ ತಿಳಿಸಿದ್ದಾರೆ.