ಹಾಸನ: ರಾಜ್ಯದಲ್ಲಿ ಮಾದರಿ ಆಸ್ಪತ್ರೆಯಾಗಿರುವ ಹಿಮ್ಸ್‌ಗೆ ರಾಜ್ಯದ ಹಲವು ಜಿಲ್ಲೆಗಳಿಂದ ರೋಗಗಳು ಆಗಮಿಸುತ್ತಾರೆ.ಅವರ ಜತೆ ವೈದ್ಯರು ಮತ್ತು ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ನಗರದ ಹಿಮ್ಸ್ ಸಭಾಂಗಣದಲ್ಲಿ ಬುಧವಾರ ನಡೆದ ಜನ ಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ಈ ಆಸ್ಪತ್ರೆಗೆ ಹಾಸನ ಮಾತ್ರವಲ್ಲದೆ ಚಿಕ್ಕಮಗಳೂರು, ಮಂಡ್ಯ, ಕೊಡಗು ಜಿಲ್ಲೆಯಿಂದ ಜನರು ಬರುತ್ತಾರೆ.ಏನೇ ಸಮಸ್ಯೆಯಿದ್ದರೂ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ದೂರುಗಳಿಗೆ ಆಸ್ಪದ ಮಾಡಿಕೊಡಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಹಿಮ್ಸ್‌ನಲ್ಲಿ ವೈದ್ಯಕೀಯ ವ್ಯವಸ್ಥೆ ಚೆನ್ನಾಗಿದೆ. ನನಗೂ ಡೆಂೆವಿನಿಂದ ಬಳಲುತ್ತಿದ್ದ ನಾನು ಸಹ ಇಲ್ಲಿ ಒಳರೋಗಿಯಾಗಿ ದಾಖಲಾಗಿದ್ದೆ. ಆ ಸಂದರ್ಭದಲ್ಲಿ ಎಲ್ಲಾರು ಚನ್ನಾಗಿ ನೋಡಿಕೊಂಡಿದ್ದಾರೆ.ಅಲ್ಲದೇ ಈ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ದೊಡ್ಡ ಸಂಸ್ಥೆಯನ್ನು ಆಡಳಿತ ಮಂಡಳಿ ಚೆನ್ನಾಗಿ ನಿಬಾಯಿಸುತ್ತಿದೆ. ಒಂದು ಬಾರಿ ದಿಢೀರ್ ಭೇಟಿ ಮೂಲಕವು ವ್ಯವಸ್ಥೆ ಪರಿಶೀಲಿಸಿದ್ದೇನೆ. ನನಗೆ ಯಾವ ಲೋಪದೋಷಗಳು ಗಮನಕ್ಕೆ ಬಂದಿಲ್ಲವೆಂದು ಹೇಳಿದರು.
ಜಿಲ್ಲೆಯ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಾಕಷ್ಟು ಪರಿಶ್ರಮದಿಂದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಸ್ಥಾಪಿಸಲಾಗಿದೆ. ಸಣ್ಣಪುಟ್ಟ ವಿಚಾರಗಳನ್ನೇ ದೊಡ್ಡದು ಮಾಡಿ ಅದರ ಗೌರಕ್ಕೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದರು.
ದಲಿತ ಮುಖಂಡ ದಿನೇಶ್ ಅವರು, ಆಡಳಿತಾತಕ ಹುದ್ದೆಯಲ್ಲಿ ದಲಿತರಿಗೆ ಅವಕಾಶ ನೀಡುತ್ತಿಲ್ಲ. ಹಿಮ್ಸ್‌ನಲ್ಲಿ ಹಿಂದುಳಿದ ವರ್ಗಗಳಿಗೆ ಶೋಷಣೆಯಾಗುತ್ತಿದೆಂಬ ವಿಚಾರ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ, ಖಾಲಿ ಹುದ್ದೆಗಳ ಭರ್ತಿ, ಬಡ್ತಿ ಎಲ್ಲವೂ ಸರ್ಕಾರದ ಮಟ್ಟದಲ್ಲಿ ಆಗುತ್ತದೆ. ಜಾತಿ ಹೆಸರಿನಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ತರಬಾರದು. ಏನೇ ಸಮಸ್ಯೆಗಳಿದ್ದರೂ ಲಿಖಿತವಾಗಿ ದೂರು ಸಲ್ಲಿಸಿ ಎಂದು ಮನವಿ ಮಾಡಿದರು.
ದಲಿತ ಮುಖಂಡ ಜಗದೀಶ್ ಚೌಡವಳ್ಳಿ ಅವರು ಮಾತನಾಡಿ, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ನೀಡಬೇಕೆಂದು ಸರ್ಕಾರದ ನಿಯಮವಿದ್ದರೂ 2019ರಿಂದ ಹಿಮ್ಸ್‌ನಲ್ಲಿ ಶೇ. 50 ರಷ್ಟು ಶುಲ್ಕ ಪಡೆಯಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಹಿಮ್ಸ್ ಅಭಿವೃದ್ಧಿ ದೃಷ್ಟಿಯಿಂದ ಹಣ ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ. ತಿಂಗಳಿಗೆ ಕನಿಷ್ಟ 1.50 ಕೋಟಿ ರೂ.ನಷ್ಟು ಸಂಗ್ರಹವಾಗುತ್ತಿದ್ದು, ಆ ಹಣ ಯಾವುದಕ್ಕೆ ಖರ್ಚಾಗಿದೆಯೆಂಬುದನ್ನು ಬಹಿರಂಗಪಡಿಸಬೇಕು. ಬಡಕುಟುಂಬಗಳೇ ಆಸ್ಪತ್ರೆಗೆ ಬರುವುದರಿಂದ ಉಚಿತ ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಹಿಮ್ಸ್ ಪ್ರಾಂಶುಪಾಲ ಡಾ.ಬಿ.ಸಿ.ರವಿಕುಮಾರ್ ಅವರು ಪ್ರತಿಕ್ರಿಯಿಸಿ, ಈ ಆಸ್ಪತ್ರೆ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸ್ಥಳೀಯವಾಗಿ ಸಂಪನ್ಮೂಲ ಕ್ರೂಢಿಕರಿಸಬೇಕೆಂದು ಸರ್ಕಾರವೇ ಮೌಖಿಕ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ರೋಗಿಗಳಿಂದ ಹಣ ಪಡೆಯುತ್ತಿರುವುದು ಸಂಸ್ಥೆಯ ಅಭಿವೃದ್ಧಿಗೆ ಹೊರತು ಬೇರೆ ಉದ್ದೇಶಕ್ಕಾಗಿ ಅಲ್ಲವೆಂದು ಸ್ಪಷ್ಟಪಡಿಸಿದರು.
ಅಶ್ವಿನಿ ಎಂಬುವವರು ಮಾತನಾಡಿ, ತಮ ಪುತ್ರನ ಎರಡೂ ಕಣ್ಣುಗಳು ಕಾಣಿಸದೆ ಸಂಪೂರ್ಣ ಅಂಧನಾಗಿದ್ದರೂ ವೈದ್ಯರು ಶೇ. 30 ರಷ್ಟು ಮಾತ್ರ ದೃಷ್ಟಿ ವಿಕಲತೆ ಎಂದು ಪ್ರಮಾಣ ಪತ್ರ ನೀಡುತ್ತಿದ್ದಾರೆ. ಅದರಿಂದ ಸರ್ಕಾರಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಸಿ.ಲೋಕೇಶ್, ಪ್ರಾಂಶುಪಾಲ ಡಾ.ಬಿ.ಸಿ.ರವಿಕುಮಾರ್, ಡಾ.ರಾಘವೇಂದ್ರ ಇತರರಿದ್ದರು.