ಗುಂಡ್ಲುಪೇಟೆ: ವಾರಾಂತ್ಯ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟ ಮತ್ತು ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಎರಡನೇ ಶನಿವಾರ, ಭಾನುವಾರದ ರಜೆಯೊಂದಿಗೆ ಸೋಮವಾರ ಅಂಬೇಡ್ಕರ್ ಜಯಂತಿಯ ಅಂಗವಾಗಿ ರಜೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಇತ್ತೀಚೆಗಷ್ಟೇ ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಗೋಪಾಲಸ್ವಾಮಿಬೆಟ್ಟ ಮತ್ತು ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಸಾಮಾನ್ಯ ದಿನಗಳಲ್ಲಿ ಎರಡು ಮೂರು ಬಸ್‌ಗಳನ್ನು ನಿಯೋಜಿಸುತ್ತಿದ್ದ ಸಾರಿಗೆ ಸಂಸ್ಥೆ ಶನಿವಾರ ಬೆಳಗಿನಿಂದಲೂ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಹದಂತೆ ಹರಿದುಬರುತ್ತಿರುವ ಪ್ರವಾಸಿಗರಿಗೆ ಬಸ್ ಸೌಕರ್ಯ ಒದಗಿಸಲು ತಿಣುಕಾಡುತ್ತಿದೆ. ಸುಮಾರು 5 ಬಸ್ಸುಗಳನ್ನು ನಿಯೋಜಿಸಿದರೂ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಬೆಟ್ಟದ ಮೇಲೆಯೂ ಮೈಲುದ್ದಕ್ಕೆ ಸರತಿಯಲ್ಲಿ ಸಾಗಿ ಸ್ವಾಮಿಯ ದರ್ಶನ ಪಡೆದುಕೊಂಡರು.
ಬೆಟ್ಟಕ್ಕೆ ಆಗಮಿಸುವ ಮತ್ತು ಬೇಸಿಗೆ ರಜೆ ಕಳೆಯಲು ಊಟಿಗೆ ತೆರಳುವ ಪ್ರಯಾಣಿಕರು ಏಕಕಾಲದಲ್ಲಿ ಸಫಾರಿಗೆ ಆಗಮಿಸಿದ್ದರಿಂದ ನೂಕುನುಗ್ಗುಲು ಉಂಟಾಗಿತ್ತು. ಆನ್‌ಲೈನ್ ಮತ್ತು ಆಫ್ ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೂ ಸಫಾರಿಗೆ ತೆರಳಲು ಕಾದುನಿಲ್ಲುವಂತಾಗಿತ್ತು. ಸಫಾರಿ ಟಿಕೆಟ್ ಸಿಗದ ಎಷ್ಟೋ ಜನರು ನಿರಾಶರಾಗಿ ವಾಪಸಾದರು.
ಗೋಪಾಲಸ್ವಾಮಿಬೆಟ್ಟ ಹಾಗೂ ಬಂಡೀಪುರಕ್ಕೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಬಂದಿದ್ದಾರೆ. ಎಲ್ಲ ವಾಹನಗಳೂ ಭರ್ತಿಯಾಗಿದ್ದರಿಂದ ನೂರಾರು ಪ್ರವಾಸಿಗರು ಸಫಾರಿಗೆ ತೆರಳು ಸಾಧ್ಯವಾಗದೆ ವಾಪಸಾಗಿದ್ದಾರೆ. ಶನಿವಾರ ಒಂದೇ ದಿನ ಸಫಾರಿಯಿಂದ ಸುಮಾರು 8ರಿಂದ 9 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗಿದೆ.
ಎಂ.ಮಲ್ಲೇಶ್, ಗೋಪಾಲಸ್ವಾಮಿ ಬೆಟ್ಟ ವಲಯದ ಆರ್ ಎಫ್‌ಒ