ಗುಂಡ್ಲುಪೇಟೆ: ವಾರಾಂತ್ಯ ಹಾಗೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟ ಮತ್ತು ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.
ಕಳೆದ ವಾರ ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆಯ ರಜೆಗಳು ಮತ್ತು ಶನಿವಾರ, ಭಾನುವಾರದ ರಜೆಯಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಗೋಪಾಲಸ್ವಾಮಿಬೆಟ್ಟ ಮತ್ತು ಬಂಡೀಪುರಕ್ಕೆ ಪ್ರವಾಸಿಗರು ಹಿಂಡು ಹಿಂಡಾಗಿ ಬರುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಎರಡು ಮೂರು ಬಸ್ಸುಗಳನ್ನು ನಿಯೋಜಿಸುತ್ತಿದ್ದ ಸಾರಿಗೆ ಸಂಸ್ಥೆ ಶನಿವಾರ ಬೆಳಗಿನಿಂದಲೂ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಹದಂತೆ ಹರಿದುಬರುತ್ತಿರುವ ಪ್ರವಾಸಿಗರಿಗೆ ಬಸ್ ಸೌಕರ್ಯ ಒದಗಿಸಲು ತಿಣುಕಾಡುತ್ತಿದೆ. ಸುಮಾರು 5 ಬಸ್ಸುಗಳನ್ನು ನಿಯೋಜಿಸಿದರೂ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತಾಗುತ್ತಿದೆ. ಬೆಟ್ಟದ ಮೇಲೆಯೂ ಮೈಲುದ್ದಕ್ಕೆ ಸರದಿಯಲ್ಲಿ ಸಾಗಿ ಸ್ವಾಮಿಯ ದರ್ಶನ ಪಡೆದುಕೊಂಡರು.
ಬೆಟ್ಟಕ್ಕೆ ಹಾಗೂ ಊಟಿಗೆ ತೆರಳುವ ಪ್ರಯಾಣಿಕರು ಮಾರ್ಗ ಮಧ್ಯೆ ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಸಫಾರಿಗೆ ತೆರಳಲು ಆಗಮಿಸಿದ್ದರಿಂದ ನೂಕು ನುಗ್ಗುಲುಂಟಾಗಿತ್ತು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರೂ ಸಫಾರಿಗೆ ತೆರಳಲು ಕಾದು ನಿಲ್ಲುವಂತಾಗಿತ್ತು. ಸಫಾರಿ ಟಿಕೆಟ್ ಸಿಗದ ಎಷ್ಟೋ ಜನರು ನಿರಾಶರಾಗಿ ವಾಪಸಾದರು.
ಗೋಪಾಲಸ್ವಾಮಿಬೆಟ್ಟ ಹಾಗೂ ಬಂಡೀಪುರಕ್ಕೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಎಲ್ಲ ವಾಹನಗಳೂ ಭರ್ತಿಯಾಗಿದ್ದರೂ ಪ್ರವಾಸಿಗರನ್ನು ಸಫಾರಿಗೆ ಕಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಎಂ.ಮಲ್ಲೇಶ್, ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎಫ್‌ಒ