ಜಿಲ್ಲೆ

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ವಾರಾಂತ್ಯ ಹಾಗೂ ವಷಾರ್ಂತ್ಯದ ರಜೆಗಳ ಹಿನ್ನೆಲೆಯಲ್ಲಿ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿತು. ಭಾನುವಾರ ಬೆಳ್ಳಂಬೆಳಗ್ಗೆ ರಾಜ್ಯದ ನಾನಾ ಭಾಗಗಳಿಂದ ಬಂದ ಪ್ರವಾಸಿಗರು ಲಗ್ಗೆಯಿಟ್ಟ ಪರಿಣಾಮ ಬೆಟ್ಟಕ್ಕೆ ಹೋಗುವ ಬಸ್ಸುಗಳಿಗಾಗಿ ಗಂಟೆಗಟ್ಟಲೆ ಕಾದು ನಿಲ್ಲುವಂತಾಗಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇರುವುದರಿಂದ ಇಲ್ಲಿಗೆ ಖಾಸಗಿ ವಾಹನಗಳ ಸಂಚಾರ ನಿಬರ್ಂಧಿಸಲಾಗಿದೆ. ಇದರಿಂದ ಬೆಟ್ಟಕ್ಕೆ ಹೋಗುವ ಪ್ರವಾಸಿಗರು ಸಾರಿಗೆ ಬಸ್ಸುಗಳಲ್ಲಿಯೇ ಹೋಗಬೇಕಾಗುತ್ತದೆ. ಅರಣ್ಯ ಅಭಿವೃದ್ಧಿ ಸಮಿತಿಯ ಎರಡು ಜೀಪುಗಳು ಅವಿರತವಾಗಿ ಸಂಚರಿಸಿದರೂ ಪ್ರವಾಸಿಗರು ಕಾದು ನಿಲ್ಲುವಂತಾಗಿತ್ತು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಸಾಮಾನ್ಯ ದಿನಗಳಲ್ಲಿ ಎರಡು ಮೂರು ಬಸ್ಸುಗಳನ್ನು ನಿಯೋಜಿಸುತ್ತಿದೆ. ಇತ್ತೀಚೆಗೆ ದೇವಾಲಯದ ಬಳಿಯೇ ಸುತ್ತಾಡುವ ಆನೆ, ಮಾರ್ಗದಲ್ಲಿ ಕಂಡುಬರುವ ಹುಲಿ ಹಾಗೂ ಚಿರತೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುತ್ತಿವೆ. ಈ ದೃಶ್ಯಗಳನ್ನು ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹೋಗುವ ಪ್ರವಾಸಿಗರ ಸಂಖ್ಯೆ ಪ್ರತಿ ದಿನವು ಹೆಚ್ಷಾಗುತ್ತಿದೆ. ಸಾರಿಗೆ ಸಂಸ್ಥೆ ಭಾನುವಾರ 12 ಬಸ್ಸುಗಳನ್ನು ಹಾಕಿದ್ದರೂ ಹರಿದು ಬರುತ್ತಿದ್ದ ಪ್ರವಾಸಿಗರಿಗೆ ಸಾಲದಂತಾಗಿತ್ತು. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಷಾರ್ಂತ್ಯದ ರಜೆಯ ಹಿನ್ನೆಲೆಯಲ್ಲಿ ಊಟಿ ಬಂಡೀಪುರಕ್ಕೆ ಆಗಮಿಸಿದ ಪ್ರವಾಸಿಗರು ನೆರೆಯ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಹದೋಪಾದಿಯಲ್ಲಿ ಆಗಮಿಸಿದರು.

ಇದರಿಂದ ಬೆಟ್ಟದ ತಪ್ಪಲಿನಲ್ಲಿರುವ ಟಿಕೆಟ್ ಕೌಂಟರ್ ಬಳಿ ಮಹಿಳೆಯರು ಮಕ್ಕಳು ಹಾಗೂ ವೃದ್ಧರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿತ್ತು. ಪ್ರವಾಸಿಗರು ಹೆಚ್ಚಾಗುತ್ತಿದ್ದಂತೆ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್ಸುಗಳು ಕಳುಹಿಸಿದ ನಂತರ ಮಧ್ಯಾಹ್ನದ ವೇಳೆಗೆ ನೂಕು ನುಗ್ಗಲು ಕಡಿಮೆಯಾಯಿತು.

ಕಳೆದ ಒಂದು ವಾರದಿಂದ ಬಂಡೀಪುರಕ್ಕೆ ಬರುವ ಪ್ರವಾಸಿಗರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಅನುಗುಣವಾಗಿ ಹೆಚ್ಚಿನ ಬಸ್ಸುಗಳನ್ನು ಕರೆಸಿ ಪ್ರವಾಸಿಗರು ಸುಗಮವಾಗಿ ದೇವಾಲಯಕ್ಕೆ ನೋಡಿಕೊಳ್ಳಲಾಗುತ್ತಿದೆ. ಬಿ.ಎಂ.ಮಲ್ಲೇಶ್ ಗೋಪಾಲಸ್ವಾಮಿ ಬೆಟ್ಟ, ವಲಯದ ಆರ್‌ಎಫ್‌ಒ